ಬರಿಗಾಲಿನಲ್ಲಿಯೇ 11 ಸೆಕೆಂಡ್‍ನಲ್ಲಿ 100 ಮೀಟರ್- ಗ್ರಾಮೀಣ ಪ್ರತಿಭೆಯ ಮಿಂಚಿನ ಓಟ

-ಕೇಂದ್ರದಿಂದ ಸಿಕ್ತು ಅವಕಾಶ

ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳು ಬೇಕಾದ್ರೆ ಗ್ರಾಮಗಳಿಗೆ ಭೇಟಿ ನೀಡಬೇಕೆಂಬ ಮಾತಿದೆ. ಅದೆಷ್ಟೋ ಕ್ರೀಡಾ ಆಸಕ್ತರಿಗೆ ಸೂಕ್ತ ವೇದಿಕೆ ಸಿಗದ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿಯೇ ಉಳಿಯುತ್ತಾರೆ. ಇದೀಗ ಅಂತಹವುದೇ ಗ್ರಾಮೀಣ ಪ್ರತಿಭೆ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದ ಗ್ರಾಮೀಣ ಪ್ರತಿಭೆಗೆ ಕೇಂದ್ರ ವೇದಿಕೆ ಕಲ್ಪಿಸಲು ಮುಂದಾಗಿದೆ.

ಮಧ್ಯ ಪ್ರದೇಶದ ಶಿವಪುರಿ ನಿವಾಸಿಯಾದ 19 ವರ್ಷದ ರಾಮೇಶ್ವರ್ ಗುರ್ಜಾರ್ ಎಂಬ ಯುವಕನ ಓಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿತ್ತು. ರಾಮೇಶ್ವರ್ 100 ಮೀಟರ್ ಅಂತರವನ್ನು ಕೇವಲ 11 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿದ್ದಾನೆ. ಬರಿಗಾಲಿನಲ್ಲಿಯೇ ರಾಮೇಶ್ವರ್ ಓಡಿದ್ದು, ಸ್ಥಳೀಯರು ಆತನನ್ನು ‘ಉಸೇನ್ ಬೋಲ್ಟ್’ ಜೊತೆ ಹೋಲಿಕೆ ಮಾಡಲಾರಂಭಿಸಿದ್ದಾರೆ.

ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಯುವಕನಿಗೆ ಸೂಕ್ತ ವೇದಿಕೆ ನೀಡಬೇಕೆಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜೂ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಭಾರತ ಇಂತಹ ಕ್ರೀಡಾಸಕ್ತರನ್ನು ಹೊಂದಿರುವ ದೊಡ್ಡ ಆಗರವಾಗಿದೆ. ಇಂತಹ ಗ್ರಾಮೀಣ ಪ್ರತಿಭೆಗೆ ಸೂಕ್ತ ತರಬೇತಿ ಮತ್ತು ವೇದಿಕೆ ದೊರೆತಲ್ಲಿ ಆತ ಇತಿಹಾಸ ರಚಿಸುವ ಸಾಮಥ್ರ್ಯ ಹೊಂದಿದ್ದಾನೆ. ಹಾಗಾಗಿ ಕ್ರೀಡಾ ಸಚಿವರಾದ ಕಿರಣ್ ರಿಜಿಜು ಮತ್ತು ಭಾರತದ ಕ್ರೀಡಾ ಇಲಾಖೆ ಯುವ ಓಟಗಾರನನ್ನು ಪ್ರೋತ್ಸಾಹಿಸಬೇಕೆಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಿರಣ್ ರಿಜಿಜು, ಅಥ್ಲೀಟ್ ರಾಮೇಶ್ವರನನ್ನು ನನ್ನ ಬಳಿ ಕರೆದುಕೊಂಡು ಬನ್ನಿ. ಆತನನ್ನು ಅಥ್ಲೀಟ್ ಅಕಾಡೆಮಿಯಲ್ಲಿ ತರಬೇತಿ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಕೊಡಲಾಗುತ್ತದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *