ಮಧ್ಯಪ್ರದೇಶದಲ್ಲಿ ತಡರಾತ್ರಿ ಆಪರೇಷನ್ ಕಮಲ – ಚಿಕ್ಕಮಗಳೂರು ರೆಸಾರ್ಟಿಗೆ ಶಾಸಕರು ಶಿಫ್ಟ್

– ಕರ್ನಾಟಕ ಮಾದರಿಯಲ್ಲಿ ಆಪರೇಷನ್
– ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ಶಾಸಕರು
– ತಡರಾತ್ರಿ ಚಿಕ್ಕಮಗಳೂರಿಗೆ ಶಿಫ್ಟ್

ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲ ಮಾದರಿಯಲ್ಲಿ ತಡರಾತ್ರಿ ಮಧ್ಯಪ್ರದೇಶದಲ್ಲಿ ಆಪರೇಷನ್ ಆರಂಭಗೊಂಡಿದ್ದು 12 ಮಂದಿ ಶಾಸರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಸಂಬಂಧ 8 ಮಂದಿ ಶಾಸಕರು ದೆಹಲಿಗೆ ಶಿಫ್ಟ್ ಆಗಿದ್ದರೆ ರಾತ್ರೋರಾತ್ರಿ 4 ಮಂದಿ ಶಾಸಕರು ಕರ್ನಾಟಕಕ್ಕೆ ಶಿಫ್ಟ್ ಆಗಿದ್ದಾರೆ.

ತಡರಾತ್ರಿ 4 ಶಾಸಕರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದು ಅವರು ಈಗ ಚಿಕ್ಕಮಗಳೂರಿನ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಡಿಸಿಎಂ ಒಬ್ಬರ ಕಣ್ಗಾವಲಿನಲ್ಲಿ ಚಿಕ್ಕಮಗಳೂರಿನಲ್ಲಿ ನಾಲ್ವರು ಕೈ ಶಾಸಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್‍ನಲ್ಲಿ ಬಿಜೆಪಿ ಬಲವಂತವಾಗಿ ಶಾಸಕರನ್ನು ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಧ್ಯ ಪ್ರದೇಶದ ಸಚಿವ, ಕಾಂಗ್ರೆಸ್ ನಾಯಕರಾದ ಜಿತು ಪಟ್‍ವಾರಿ ಮತ್ತು ಜೈವರ್ಧನ್ ಸಿಂಗ್ ಅವರು ಐಟಿಸಿ ರೆಸಾರ್ಟ್‍ಗೆ ತೆರಳಿ ಉಚ್ಚಾಟಿತ ಬಿಎಸ್‍ಪಿ ಶಾಸಕಿ ರಮಾಬಾಯಿ ಅವರ ಜತೆ ತೆರಳುತ್ತಿರುವ ವಿಡಿಯೋ ಲಭ್ಯವಾಗಿದೆ.

ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಮತ್ತು ಸಂಜಯ್ ಪಾಠಕ್ ಶಾಸಕರಿಗೆ ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಕಮಲನಾಥ್ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಎಲ್ಲ ಶಾಸಕರು ವಾಪಸ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ದಿಗ್ವಿಜಯ್ ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ನಡೆದಂತೆ ಮಧ್ಯಪ್ರದೇಶದಲ್ಲಿ ಸರ್ಕಾರ ಬೀಳಿಸಲು ನಾವು ಬಿಡುವುದಿಲ್ಲ. 25-30 ಕೋಟಿ ರೂ. ನೀಡಿ ಬಿಜೆಪಿ ಶಾಸಕರನ್ನು ಖರೀದಿಸಲು ಮುಂದಾಗುತ್ತಿದೆ. ಮೊದಲ ಕಂತಿನಲ್ಲಿ 5 ಕೋಟಿ ನಂತರ ರಾಜ್ಯಸಭಾಗೆ ಆಯ್ಕೆ ಮಾಡುವುದು, ಕೊನೆಗೆ ಉಳಿದ ಹಣ ಹಂಚಿಕೆ ಸಂಬಂಧ ಒಪ್ಪಂದ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಗೋಪಾಲ್ ಭಾರ್ಗವ್, ಬಿಜೆಪಿ ಯಾರನ್ನು ಸಂಪರ್ಕಿಸಿಲ್ಲ. ಅಧಿಕಾರದಲ್ಲಿರುವ ಶಾಸಕರ ತಾವಾಗಿಯೇ ಬಿಜೆಪಿಗೆ ಬಂದರೆ ಸ್ವಾಗತ ಎಂದಿದ್ದರು. ಪ್ರಸ್ತುತ 230 ಸದಸ್ಯರನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಪರ ಸ್ಪೀಕರ್ ಸೇರಿ 121 ಶಾಸಕರ ಬಲವನ್ನು ಹೊಂದಿದೆ.

ಕಳೆದ ಜುಲೈನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

Comments

Leave a Reply

Your email address will not be published. Required fields are marked *