ಛಪಾಕ್ ಚಿತ್ರದಿಂದ ಎಚ್ಚೆತ್ತ ಮಧ್ಯಪ್ರದೇಶ ಸರ್ಕಾರ – ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ

ಭೋಪಾಲ್: ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಸಿನಿಮಾದಿಂದ ಪ್ರೇರಣೆಗೊಂಡು ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ.

ಛಪಾಕ್ ಚಿತ್ರ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಅವರ ಕಥೆಯಾಗಿದ್ದು, ಆ್ಯಸಿಡ್ ದಾಳಿ ಬಳಿಕ ಹೇಗೆ ಲಕ್ಷ್ಮಿ ಅವರು ಜೀವನದಲ್ಲಿ ಹೋರಾಡಿದರು ಎನ್ನುವ ಬಗ್ಗೆ ಸಿನಿಮಾದಲ್ಲಿ ತಿಳಿಸಲಾಗಿದೆ. ಈ ಚಿತ್ರದಿಂದ ಪ್ರೇರೇಪಿತವಾದ ಮಧ್ಯಪ್ರದೇಶ ಸರ್ಕಾರ ಮೊದಲು ರಾಜ್ಯದೆಲ್ಲೆಡೆ ಛಪಾಕ್ ಚಿತ್ರಕ್ಕೆ ತೆರಿಗೆ ಹಾಕಲ್ಲ ಎಂದು ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಸರ್ಕಾರ ಆಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ. ಅಕ್ರಮ ಆ್ಯಸಿಡ್ ಮಾರಾಟದಿಂದ ಆ್ಯಸಿಡ್ ದಾಳಿ ಆಗುತ್ತದೆ. ಅಮಾಯಕ ಹೆಣ್ಣುಮಕ್ಕಳ ಜೀವನ ಇದರಿಂದ ಹಾಳಾಗುವುದನ್ನು ತಡೆಯಲು ಮಧ್ಯಪ್ರದೇಶ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಇದನ್ನೂ ಓದಿ: ಕಪ್ಪು ವಸ್ತ್ರಧರಿಸಿ ಜೆಎನ್‍ಯುಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

ಈ ಬಗ್ಗೆ ಸ್ವತಃ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಗುರುವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟವನ್ನು ತಡೆಯುವುದು ಅತ್ಯಂತ ಮುಖ್ಯವಾಗಿದೆ. ಇನ್ನೂ ಆ್ಯಸಿಡ್ ದಾಳಿಗಳನ್ನು ಸಹಿಸಿಕೊಳ್ಳಲು ಆಗಲ್ಲ. ರಾಜ್ಯಾದ್ಯಂತ ಈ ವಿರುದ್ಧ ಅಭಿಯಾನ ನಡೆಸಲು ಈಗಾಗಲೇ ಸೂಚಿಸಲಾಗಿದೆ. ಆ್ಯಸಿಡ್ ದಾಳಿ ಅನಾಗರಿಕತೆ, ಕ್ರೌರ್ಯತೆಯ ಸುಳಿವು. ಇದನ್ನು ನಾವು ಮಟ್ಟಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

ಕೇವಲ ಸಿನಿಮಾವನ್ನು ತೆರಿಗೆ ರಹಿತ ಮಾಡಿದರೆ ಸಾಲುವುದಿಲ್ಲ. ಇಂತಹ ಅಮಾನವೀಯ ಕೃತ್ಯಗಳನ್ನು ನಾವು ತಡೆಯಬೇಕು. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಆದ್ದರಿಂದಲೇ ಈ ಅಭಿಯಾನ ಆರಂಭಿಸಿದ್ದೇವೆ ಎಂದು ಕಮಲ್‍ನಾಥ್ ಟ್ವೀಟ್ ಮಾಡಿದ್ದಾರೆ.

ಪದ್ಮಾವತ್ ಬಳಿಕ ದೀಪಿಕಾ ಪಡುಕೋಣೆ ಛಪಾಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ.

ಓದಬೇಕೆಂಬ ದೊಡ್ಡ ಕನಸು ಕಂಡ ಯುವತಿಯ ಮೇಲೆ ದುಷ್ಕರ್ಮಿಗಳ ಆ್ಯಸಿಡ್ ದಾಳಿ, ಸ್ಪುರದ್ರೂಪಿಯಾಗಿದ್ದ ಯುವತಿ ತನ್ನನ್ನ ಕನ್ನಡಿಯಲ್ಲಿ ನೋಡಿಕೊಂಡು ಭಯಬೀಳುವ ದೃಶ್ಯಗಳು, ಆ್ಯಸಿಡ್ ದಾಳಿ ಬಳಿಕ ಮನೆಯಿಂದ ಹೊರ ಬರಲು ಹಿಂಜರಿತ, ಆಕೆಯ ಬೆನ್ನಲುಬಾಗಿ ನಿಲ್ಲುವ ಹೋರಾಟಗಾರ್ತಿಯರು, ಸ್ನೇಹಿತರ ಬಾಂಧವ್ಯವನ್ನು ಚಿತ್ರತಂಡ ತೋರಿಸಿರೋದು ಕಣ್ಣಿಗೆ ಕಟ್ಟುವಂತಿದೆ. ಧೈರ್ಯಗುಂದದೇ ನ್ಯಾಯಕ್ಕಾಗಿ ಹೋರಾಟ, ಸಮಾಜ ಸಂತ್ರಸ್ತೆಯನ್ನು ಕಾಣುವ ದೃಷ್ಟಿ, ಕಷ್ಟಗಳ ಸಂಕೋಲೆಯಲ್ಲಿ ಬದುಕುತ್ತಿದ್ದ ಜೀವಕ್ಕೆ ಗೆಳೆಯನ ತಂಪಾದ ಆಸರೆ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ದೀಪಿಕಾ ಜೆಎನ್‍ಯುಗೆ ಭೇಟಿ ಕೊಟ್ಟ ಹಿನ್ನೆಲೆ ಛಪಾಕ್ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ಚಿತ್ರದಲ್ಲಿರುವ ಸಂದೇಶ, ಸತ್ಯಾಂಶ ಮನಗಂಡವರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಆಫೀಸ್‍ನ್ನಲ್ಲಿ ಈ ಚಿತ್ರ ಹೆಚ್ಚು ಗಳಿಸದಿದ್ದರೂ ಇದರ ಸಂದೇಶ ಮಾತ್ರ ಜನರನ್ನು ತಲುಪಿದೆ.

Comments

Leave a Reply

Your email address will not be published. Required fields are marked *