ಎಕ್ಸಿಟ್ ಪೋಲ್ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ

ನವದೆಹಲಿ: ಈ ಬಾರಿಯೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‍ಗಳು ಭವಿಷ್ಯ ನುಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಗರಿಗೆದರಿದೆ. ಮಧ್ಯಪ್ರದೇಶದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ರಾಜ್ಯಪಾಲರದ ಆನಂದಿಬೆನ್ ಪಟೇಲ್ ಅವರಿಗೆ ಪತ್ರ ಬರೆದಿದೆ.

ಸರ್ಕಾರಕ್ಕೆ ಬೇಕಾದ ಬಹುಮತ ಇಲ್ಲ. ಹೀಗಾಗಿ ವಿಶೇಷ ಅಧಿವೇಶನ ಕರೆದು ವಿಶ್ವಾಸ ಮತಯಾಚನೆ ನಡೆಸುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಬೇಕೆಂದು ಬಿಜೆಪಿ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.

ಮಧ್ಯಪ್ರದೇಶ ವಿರೋಧಿ ಪಕ್ಷದ ನಾಯಕರಾಗಿರುವ ಗೋಪಾಲ್ ಭಾರ್ಗವ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾವು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದು, ಬಹುಮತ ಇಲ್ಲದ ಕಾರಣ ಸರ್ಕಾರ ಉಳಿಯುವ ಸಾಧ್ಯತೆ ಇಲ್ಲ. ಆದರೆ ನಾವು ಯಾವುದೇ ಕುದುರೆ ವ್ಯಾಪಾರದಲ್ಲಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಕುತೂಹಲ ಮೂಡಿಸಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ ಪಕ್ಷ 24 ಕ್ಷೇತ್ರಗಳಲ್ಲಿ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿವೆ.

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್ ಕಮಲ್ ನಾಥ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. 2018ರ ವಿಧಾನ ಸಭಾ ಚುನಾವಣೆಯಲ್ಲಿ 230 ಸ್ಥಾನಗಳ ಪೈಕಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್‍ಪಿ 2 ಹಾಗೂ ಇತರೇ 5 ಸ್ಥಾನಗಳನ್ನು ಪಡೆದಿದ್ದಾರೆ. ಈ ವೇಳೆ ಮಾಯಾವತಿ, ಅಖಿಲೇಶ್ ಯಾದವ್ ಅವರ ಪಕ್ಷಗಳೂ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ 116 ಸ್ಥಾನಗಳ ಅಗತ್ಯವಿದೆ.

Comments

Leave a Reply

Your email address will not be published. Required fields are marked *