ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶದ ಮಾಜಿ ಸಿಎಂ ವಾಗ್ದಾಳಿ

ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ 10 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು. 10 ಗಂಟೆ ಅಲ್ಲ ಎರಡು ತಿಂಗಳು ಕಳೆದರೂ ರೈತರ ಸಾಲಮನ್ನಾ ಆಗಿಲ್ಲ. ರಾಹುಲ್ ಗಾಂಧಿ ಒಬ್ಬ ಸುಳ್ಳಿನ ಸರದಾರ ಎಂದು ಕಿಡಿಕಾರಿದ್ದಾರೆ.

ನಾವು ಪ್ರಣಾಳಿಕೆಯ ಎಲ್ಲಾ ಭರವಸೆ ಪೂರ್ಣಗೊಳಿಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಜನರ ಮುಂದಿಡುತ್ತೇವೆ. ಕರ್ನಾಟಕದ ಸರ್ಕಾರ ಸಾಲ ಮನ್ನಾ ನೆಪದಲ್ಲಿ ರೈತರ ಮೂಗಿಗೆ ತುಪ್ಪ ಸವರಿದೆ. ದೇಶದಲ್ಲಿ ಆಗಿರೋದು ಮಹಾಘಟ ಬಂಧನ್ ಅಲ್ಲ ಬದಲಾಗಿ ಮಹಾ ಠಕ್ ಬಂಧನ್, ಸ್ವಾರ್ಥದ ಬಂಧನ್ ಆಗಿದೆ. ಏಕಾಂಗಿಯಾಗಿ ಅಧಿಕಾರಕ್ಕೆ ಈ ಬಾರಿ ಸಮರ್ಥ ನಾಯಕ ನೇತೃತ್ವದಲ್ಲಿ ಬರಲಿದ್ದೇವೆ ಅಂದ್ರು.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರು ಭಾರತೀಯ ಸೈನ್ಯವನ್ನು ಅವಮಾನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಪಕ್ಷದ ಮುಖಂಡರ ಮೇಲೆ ಹತೋಟಿ ಇಲ್ಲ. ಪುಲ್ವಾಮಾ ದಾಳಿ ವಿಚಾರದಲ್ಲಿ ನಾವು ಸರ್ಕಾರದ ಜೊತೆಯಲ್ಲಿ ಇರುತ್ತೇನೆ ಅಂದು ಹೇಳಿಕೆ ಕೊಟ್ಟ ರಾಹುಲ್ ಗಾಂಧಿ ಈಗ ಸೇನೆಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕೆಲ ಕಾಂಗ್ರೆಸ್ ಮುಖಂಡರು ಪುಲ್ವಾಮಾ ದಾಳಿ ಒಂದು ಆಕ್ಸಿಡೆಂಟ್ ಅಂದರೆ, ಇನ್ನು ಕೆಲವೊಬ್ಬರು ಮ್ಯಾಚ್ ಫಿಕ್ಸಿಂಗ್ ಎಂದು ಸೇನೆಗೆ ಅವಮಾನ ಮಾಡಿದ್ದಾರೆ. ಇಂಥವರಿಂದ ದೇಶ ಏನು ನಿರೀಕ್ಷೆ ಮಾಡಬಹುದು ಎಂದು ಜನರೇ ನಿರ್ಧಾರ ಮಾಡಲಿ ಎಂದರು.

ಇದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಸ್ಕರಿಸಿ ಸಿದ್ದಲಿಂಗ ಸ್ವಾಮಿಜಿಗಳ ಆಶೀರ್ವಾದ ಪಡೆದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *