ಕುದುರೆ ಬಿಟ್ಟು ಸಹೋದರ ಹೆಗಲು ಏರಿ ಏರ್ ಸ್ಟ್ರೈಕ್ ದಾಳಿ ಸಂಭ್ರಮಿಸಿದ ವರ

ಭೋಪಾಲ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮೂರು ನೆಲೆಗಳ ಮೇಲೆ ಮಂಗಳವಾರ ವಾಯು ಪಡೆ ನಡೆಸಿದ ದಾಳಿಗೆ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ದೆಹಲಿಯ ಆಟೋ ಚಾಲಕರೊಬ್ಬರು ತನ್ನ ಪ್ರಯಾಣಿಕರಿಗೆ ಉಚಿತ ಆಟೋ ಸೇವೆ ನೀಡಿ ಸಂಭ್ರಮಿಸಿದ್ದರು. ಇದರಂತೆ ಏರ್ ಸ್ಟ್ರೈಕ್ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯಪ್ರದೇಶ ವರನೊಬ್ಬ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

ಮಧ್ಯಪ್ರದೇಶದ ಬರ್ವಾನಿಯಲ್ಲಿ ವರ ಗಣೇಶ್ ಸುಖ್‍ಲಾಲ್ ದಿಯೋರೆ ಕುದುರೆ ಮೇಲೆ ಕುಳಿತು ಮೆರವಣಿಗೆ ಮೂಲಕ ವಧುವಿನ ಮನೆಗೆ ಹೋಗುತ್ತಿದ್ದರು. ಈ ವೇಳೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು.

ಏರ್ ಸ್ಟ್ರೈಕ್ ದಾಳಿಯನ್ನು ಜನರು ಸಂಭ್ರಮಿಸುತ್ತಿದ್ದಾಗ ವರ ಗಣೇಶ್ ಬರ್ವಾನಿ ಶಾಸ್ತ್ರೀ ನಗರದ ಮನೆಯಿಂದ ಆಗ ತಾನೇ ಮೆರವಣಿಗೆ ಹೊರಟಿದ್ದರು. ಜನರು ಡ್ರಮ್ ಬಾರಿಸಿ, ಭಾರತ್ ಮಾತಾಕೀ ಜೈ ಎನ್ನುತ್ತ ಸಂಭ್ರಮಿಸುತ್ತಿದ್ದನ್ನು ನೋಡಿದ ಗಣೇಶ್‍ಗೂ ಡ್ಯಾನ್ಸ್ ಮಾಡಬೇಕು, ಎಲ್ಲರೊಂದಿಗೆ ಖುಷಿ ಹಂಚಿಕೊಳ್ಳಬೇಕು ಎನ್ನುವ ಆಸೆಯಾಗಿತ್ತು. ಆದರೆ ಸಂಪ್ರದಾಯದ ಪ್ರಕಾರ ವಧುವಿನ ಮನೆ ತಲುಪುವರೆರಗೂ ವರ ನೆಲದ ಮೇಲೆ ಕಾಲು ಇಡುವಂತಿಲ್ಲ. ಹೀಗಾಗಿ ಕುದುರೆಯ ಮೇಲೆ ಕುಳಿತಿದ್ದ ಗಣೇಶ್ ಅವರನ್ನು ಸಹೋದರನೊಬ್ಬ ತನ್ನ ಭುಜದ ಮೇಲೆ ಕೂರಿಸಿಕೊಂಡು ಜನರು ಸೇರಿದ್ದ ಸ್ಥಳಕ್ಕೆ ಕರೆದುತಂದಿದ್ದಾನೆ.

10ನೇ ಶತಮಾನದ ಶೆಂಧ್ವಾ ಕೋಟೆಯ ಗೇಟ್ ಬಳಿ ಬಂದ ಗಣೇಶ್, ತ್ರಿವರ್ಣ ಧ್ವಜವನ್ನು ಹಿಡಿದು ಸ್ಥಳದಲ್ಲಿ ಸೇರಿದ್ದ ಜನರೊಂದಿಗೆ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

ಪುಲ್ವಾಮಾ ದಾಳಿಗೆ ಭಾರತೀಯ ವಾಯುಪಡೆ ಈ ಪ್ರಮಾಣದಲ್ಲಿ ಪ್ರತ್ಯುತ್ತರ ನೀಡುತ್ತದೆಂದು ಊಹಿಸಿರಲಿಲ್ಲ. ನಮಗೆ ಡಬಲ್ ಖುಷಿಯಾಗಿದೆ ಎಂದು ಸಂಭ್ರಮಾಚರಣೆ ಮಾಡುತ್ತಿದ್ದ ಹರೀಶ್ ಹಾಗೂ ರಾಜೇಶ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *