ಬಿಎಸ್‍ಎಫ್ ಅಧಿಕಾರಿಗೆ ಕೊರೊನಾ- 50 ಯೋಧರಿಗೆ ಹೋಮ್ ಕ್ವಾರೆಂಟೈನ್

ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬಿಎಸ್‍ಎಫ್‍ನ 57 ವರ್ಷ ವಯಸ್ಸಿನ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ 50 ಜನ ಬಿಎಸ್‍ಎಫ್ ಯೋಧರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ.

ಸೋಂಕಿತರು ಗ್ವಾಲಿಯರ್ ಜಿಲ್ಲೆಯ ತೆಕನ್‍ಪುರ ನಗರದ ಬಿಎಸ್‍ಎಫ್ ಅಕಾಡೆಮಿಯ ಅಧಿಕಾರಿಯಾಗಿದ್ದಾರೆ. ಈವರೆಗೆ ಮಧ್ಯಪ್ರದೇಶದಲ್ಲಿ 34 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.

ಸೋಂಕಿತ ಅಧಿಕಾರಿ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಮತ್ತು ಇನ್ಸ್‌ಪೆಕ್ಟರ್ ಜನರಲ್ (ಐಜಿ), ಬಿಎಸ್‍ಎಫ್ ಅಕಾಡೆಮಿಯ ನಿರ್ದೇಶಕರು ಸೇರಿದಂತೆ ಅನೇಕರು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.

ಬಿಎಸ್‍ಎಫ್ ಅಧಿಕಾರಿಗೆ ಇಂಗ್ಲೆಂಡ್ ಪ್ರವಾಸದ ಇತಿಹಾಸ ಹೊಂದಿರುವ ಪತ್ನಿಯಿಂದ ಕೋವಿಡ್-19 ತಗುಲಿರಬಹುದು ಎನ್ನಲಾಗಿದೆ. ಎರಡನೇ ಕಮಾಂಡ್ ಶ್ರೇಣಿಯ ಅಧಿಕಾರಿ ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಅಧಿಕಾರಿಯೊಬ್ಬರಿಗೆ ಶನಿವಾರ ಸೋಂಕು ತಗುಲಿರುವುದು ದೃಢವಾಗಿತ್ತು. ಈ ಬೆನ್ನಲ್ಲೇ ಬಿಎಸ್‍ಎಫ್ ಅಧಿಕಾರಿಗೆ ಸೋಂಕು ತಗುಲಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

Comments

Leave a Reply

Your email address will not be published. Required fields are marked *