ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

ಬೆಂಗಳೂರು: ಕೋಡ್‌ವರ್ಡ್‌ (Code Word) ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Bomb Blast) ಆರೋಪಿಗಳ ಬಂಧನ ಮಾಡಲಾಗಿದೆ.

ಹೌದು.ಬೆಂಗಳೂರಿನಲ್ಲಿ ಕೃತ್ಯ ಎಸಗಿದ್ದ ಮುಸಾವೀರ್ ಹುಸೇನ್ (Mussavir Hussain) ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ. ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಮುಸಾವೀರ್ ಹುಸೇನ್ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ್ದ ಅಬ್ದುಲ್ ಮತೀನ್‌ನನ್ನು (Abdul Matin) ಅರೆಸ್ಟ್‌ ಮಾಡಿದ್ದಾರೆ.

ಮಾಝ್‌ ಮುನೀರ್‌
ಮಾಝ್‌ ಮುನೀರ್‌

ಸೆರೆಯಾಗಿದ್ದು ಹೇಗೆ?
ಶಿವಮೊಗ್ಗ ತುಂಗಾ ನದಿ ತೀರದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಮಾಝ್‌ ಮುನೀರ್‌ನನ್ನು (Maaz Muneer) ಎನ್‌ಐಎ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಮುನೀರ್ ಸೆಲ್ ಮೇಲೆ ದಾಳಿ ಮಾಡಿದಾಗ ಮೆಮೋರಿ ಕಾರ್ಡ್ ಪತ್ತೆಯಾಗಿತ್ತು. ಈ ಮೆಮೋರಿ ಕಾರ್ಡ್‌ ಪರಿಶೀಲಿಸಿದಾಗ ಹಲವು ಕೋಡ್‌ ವರ್ಡ್‌ ಸಿಕ್ಕಿದ್ದವು. ಈ ಕೋಡ್‌ ವರ್ಡ್‌ ಡಿಕೋಡ್‌ ಮಾಡಿದಾಗ ಆರೋಪಿಗಳ ಮಾಹಿತಿ ಸಿಗತೊಡಗಿತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.  ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

ಈ ಖಚಿತ ಮಾಹಿತಿಯನ್ನು ಆಧಾರಿಸಿ ತನಿಖೆಗೆ ಇಳಿದಾಗ ಆರೋಪಿಗಳು ಪಶ್ಚಿಮ ಬಂಗಾಳದಲ್ಲೇ ತಲೆ ಮರೆಸಿಕೊಂಡಿದ್ದ ವಿಚಾರ ತಿಳಿದು ಬಂದಿತ್ತು. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ ಎನ್‌ಐಎ ಇಂದು ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಅಚ್ಚರಿಯ ವಿಷಯ ಏನೆಂದರೆ ಮುನೀರ್‌ ಜೈಲಿನಲ್ಲಿ ಕುಳಿತೇ ಕೋಡ್‌ ವರ್ಡ್‌ ಬರೆದಿದ್ದ.

 

ಮಾಝ್‌ ಮುನೀರ್‌ ಮೊದಲ ಆರೋಪಿ:
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್‌ ಮುನೀರ್‌ನನ್ನು ಎನ್‌ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ  ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ್‌ ಮುನೀರ್‌ ಸೂತ್ರಧಾರನಾಗಿದ್ದು ಆತನನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರುವ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮಾಝ್‌ ಮುನೀರ್‌ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್‌ ಓದುತ್ತಿದ್ದಾಗ ಬಂಧನ ಮಾಡಲಾಗಿದೆ.

ಮುಸ್ಸಾವಿರ್ ಹುಸೇನ್‌ ಶಜೀಬ್ ಮೊಹಮ್ಮದ್‌ ಜುನೈದ್ ಸಯ್ಯದ್‌ ಹೆಸರಿನಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾನೆ. ಅಬ್ದುಲ್‌ 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್‌ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್‌‌, ಸುಮಿತ್‌ ಅಥವಾ ಬೇರೆ ಹಿಂದೂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ ಎಂದು ಈ ಹಿಂದೆ ಎನ್‌ಐಎ ತಿಳಿಸಿತ್ತು.