ಕಲಬುರಗಿ: ಬಿಜೆಪಿಯವರು ನನ್ನ ಮರ್ಯಾದೆಯನ್ನು ಹಾಳುಮಾಡಿ ಬಿಟ್ಟಿದ್ದಾರೆ. ಆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಕೈ ಹಿಡಿದಿದ್ದಾರೆ. ಹೀಗಾಗಿ ನಾನು ಬಿಜೆಪಿಯನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಸ್ಟಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದೇ ತಿಂಗಳು 15ಕ್ಕೆ ಪುರಸಭೆ ಚುನಾವಣೆ ಇದೆ. ಕೆಲವು ಕಡೆ ಹೈಕೋರ್ಟ್ ನಿಂದ ಸ್ಟೇ ಬಂದಿದ್ದರಿಂದ ಚುನಾವಣೆ ಆಗುತ್ತದೆಯೇ ಇಲ್ಲವೇ ಎಂದು ಕೇಳಲು ಹೋಗಿದ್ದೆ. ರಮೇಶ್ ಜಾರಕಿಹೊಳಿ ಸಚಿವರಾದ ಹಿನ್ನೆಲೆ ಅಭಿವೃದ್ಧಿ ಕೆಲಸಕ್ಕೆ ಭೇಟಿಯಾಗಿದ್ದೆ ಹೊರತು ಬೇರೆ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ಬಿಜೆಪಿ ಸೇರುವಂತೆ ಯಾರು ಕರೆ ಮಾಡಿಲ್ಲ. ಇದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ ಎಂದು ಹೇಳಿದರು.

ನಾನು ಬಿಜೆಪಿಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ಬಿಜೆಪಿ ನನ್ನ ಮರ್ಯಾದೆಯನ್ನು ಹಾಳು ಮಾಡಿದೆ. 12 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿ ಸಾಧನೆ ಮಾಡಿದರೂ ಕೊನೆ ಗಳಿಗೆಯಲ್ಲಿ ನನ್ನನ್ನು ಕೈಬಿಟ್ಟರು. ಅದೇ ಸಂದರ್ಭದಲ್ಲಿ ಕಾಂಗ್ರೆಸಿನ ಮುಖಂಡರಾದಂತಹ ಮಲ್ಲಿಕಾರ್ಜುನ ಖರ್ಗೆ ಕೈ ಹಿಡಿದರು. ನನ್ನ ಇಳಿ ವಯಸ್ಸಿನಲ್ಲಿ ಶಾಸಕನಾಗಿ ಅವಕಾಶವನ್ನು ಕೊಟ್ಟಿದ್ದಕ್ಕೆ ನನಗೆ ತೃಪ್ತಿ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಕಡೆಗೆ ಮುಖಮಾಡಿ ನೋಡುವುದಿಲ್ಲ ಎಂದರು.
ಅವರು ಬರ್ತಾರೆ ಇವರು ಬರ್ತಾರೆ ಎಂದು ಬಿಜೆಪಿ ಗೊಂದಲವನ್ನು ಉಂಟು ಮಾಡುತ್ತಿದ್ದು, ಇದಕ್ಕೆ ಮಾಧ್ಯಮಗಳು ಬೆಂಕಿಗೆ ಉಪ್ಪು ಬೆರೆಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಈ ಇಳಿ ವಯಸ್ಸಿನಲ್ಲಿ ಪಕ್ಷಾಂತರ ಮಾಡಿ ಹೋರಾಟ ಮಾಡುವುದಕ್ಕೆ ಶಕ್ತಿ ಇಲ್ಲ. ಜನರು ಆಶೀರ್ವಾದ ಮಾಡಿ ತನಗೆ ಈ ಅವಕಾಶವನ್ನು ನೀಡಿದ್ದಾರೆ. ಹೀಗಾಗಿ ಎಂದಿಗೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಗುತ್ತೆದಾರ್ ಕಾಡು ಪ್ರಾಣಿಗಳನ್ನು ಬೆಳೆಸುತ್ತಿದ್ದಾರೆ ಎಂದು ಬಿಜೆಪಿ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply