ಗ್ರಹಣ ಎಫೆಕ್ಟ್ – ಗರಿಕೆ ತಿಂದು ದೋಷ ನಿವಾರಣೆ ಮಾಡ್ಕೊಂಡ ಶ್ವಾನ!

ಗದಗ: ದೇಶಾದ್ಯಂತ ಗ್ರಹಣದ ಸುದ್ದಿಯೇ ಇರುವಾಗ ಜಿಲ್ಲೆಯ ಮದಗಾನೂರ ಗ್ರಾಮದ ನಾಯಿಯೊಂದು ಗ್ರಹಣ ಆಚರಣೆ ಮಾಡಿ ಕುತೂಹಲ ಮೂಡಿಸಿದೆ. ಸದ್ಯ ನಾಯಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೆಯ ಅಂಗಳದಲ್ಲಿ ನಾಯಿಯ ಮಾಲೀಕರು ಸೇರಿದಂತೆ ಗ್ರಾಮದ ಕೆಲವರು ಗ್ರಹಣದ ಬಗ್ಗೆ ಮಾತನಾಡುತ್ತಾ ಕೂತಿದ್ದರು. ನೆರೆದವರು ಗ್ರಹಣದಿಂದಾಗುವ ಲಾಭ, ನಷ್ಟ, ಪರಿಹಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಗ್ರಹಣ ಕಾಲದಲ್ಲಿ ಮನೆಯೊಳಗಿನ ನೀರಿಗೆ ಗರಿಕೆ ಹಾಕಿದರೆ ಅದರಿಂದ ಯಾವುದೇ ರೀತಿಯ ದೋಷ ಬರುವುದಿಲ್ಲ ಎಂಬ ಮಾತಿನ ಮೇಲೆ ಚರ್ಚೆ ಏರ್ಪಟ್ಟಿತ್ತು. ಆಗ ಓರ್ವ ತಮ್ಮ ಮನೆಗೆ ಗರಿಕೆ ತಗೆದುಕೊಂಡು ಹೋಗುತ್ತಿದ್ದನು.

ವ್ಯಕ್ತಿ ಗರಿಕೆ ತೆಗೆದುಕೊಂಡು ಹೋಗುವಾಗ ಕೈ ಜಾರಿ ಗರಿಕೆ ಎಸಳುಗಳು ಕೆಳಗೆ ಬಿದ್ದಿವೆ. ಕೂಡಲೇ ನಾಯಿಯೊಂದು ಓಡಿ ಬಂದು ಗರಿಕೆಯ ಎಳೆಯನ್ನು ತಿನ್ನುವ ಮೂಲಕ ಅಲ್ಲಿದ್ದವರ ಗಮನ ಸೆಳೆದಿದೆ. ಕೂಡಲೇ ಅಲ್ಲಿನ ಯುವಕರು ಗರಿಕೆ ತಿಂದ ಆ ನಾಯಿಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ವೈರಲ್ ಮಾಡಿದ್ದಾರೆ.

ಮನುಷ್ಯರೆಲ್ಲರೂ ತಮ್ಮ ಮನೆಯೊಳಗಿನ ನೀರಿನ ಪಾತ್ರೆ ಸೇರಿದಂತೆ ಇತರೆ ವಸ್ತುಗಳಲ್ಲಿ ಗರಿಕೆ ಹಾಕಿದರೆ ದೋಷ ಹೋಗುತ್ತದೆ ಅನ್ನೋ ನಂಬಿಕೆಯಲ್ಲಿದ್ದರು. ಆದರೆ ಈ ನಾಯಿ ತನ್ನ ಹೊಟ್ಟೆಯೊಳಗೆನೇ ಗರಿಕೆ ಹಾಕಿಕೊಂಡಿದ್ದು, ನಾಯಿ ಮನುಷ್ಯ ಜೀವನಕ್ಕೆ ಹತ್ತಿರವಿದೆಯಾ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *