ಅಪ್ಪ, ಅಮ್ಮನ ಜೊತೆ ಇರೋಣ ಎಂದ ಪತಿ – ಮಾತು ಕೇಳದ ಪತ್ನಿಗೆ ಶೂಟ್ ಮಾಡಿ ಪರಾರಿ

-ಮನೆಗೆ ವಾಪಸ್ ಹೋಗೋಣ ಎಂದು ನಂಬಿಸಿ ಕರೆದೊಯ್ದ

ಲಕ್ನೋ: ಅಪ್ಪ, ಅಮ್ಮನ ಜೊತೆಗೆ ಇರೋಣ ಬೇರೆಯಾಗಿ ಇರೋದು ಬೇಡ ಎಂದು ಪತಿ ತನ್ನ ಪತ್ನಿಗೆ ಹೇಳಿದನು. ಆದರೆ ಇದಕ್ಕೆ ಪತ್ನಿ ಒಪ್ಪದಿದ್ದಾಗ ಸಿಟ್ಟಿಗೆದ್ದ ಪತಿ ಆಕೆಗೆ ಗನ್‍ನಿಂದ ಶೂಟ್ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಶೂಟ್ ಮಾಡಿದ ಆರೋಪಿಯನ್ನು ಶಿಕೋಹಬಾದ್ ಮೂಲದ ಪಿಂಕಿ ಠಾಕುರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಪತ್ನಿ ಶಿವಾನಿ ಸಿಂಗ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಸದ್ಯ ಗುಂಡೇಟು ತಿಂದ ಶಿವಾನಿ ಫಿರೋಜಾಬಾದಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಶಿವಾನಿ ಹಾಗೂ ಪಿಂಕಿ ಕಳೆದ 5 ವರ್ಷದ ಹಿಂದೆ ಮದುವೆ ಆಗಿದ್ದರು. ಮದುವೆ ಬಳಿಕ ದಂಪತಿ ಜೈಪುರದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಶಿವಾನಿ ಸಹೋದರಿಯ ಮದುವೆಗೆಂದು ದಂಪತಿ ಶಿಕೋಹಬಾದ್‍ಗೆ ಬಂದಿದ್ದರು. ಮದುವೆ ಮುಗಿದ ಬಳಿಕ ಪತ್ನಿ ವಾಪಸ್ ಜೈಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಳು. ಈ ವೇಳೆ ಪತಿ ನಾವು ಜೈಪುರಕ್ಕೆ ಹೋಗೋದು ಬೇಡ, ಇಲ್ಲಿಯೇ ನಮ್ಮ ಅಪ್ಪ ಅಮ್ಮನ ಜೊತೆ ಇರೋಣ ಎಂದು ಗುರುವಾರ ಪತ್ನಿಗೆ ಹೇಳಿದ್ದನು.

ಇದಕ್ಕೆ ಪತ್ನಿ ಒಪ್ಪದೇ, ನಾನು ಇಲ್ಲಿ ಇರಲ್ಲ ಜೈಪುರಕ್ಕೆ ಹೋಗೋಣ ಎಂದು ಪತಿ ಜೊತೆ ಜಗಳಕ್ಕೆ ಇಳಿದಳು. ಮಾತಿಗೆ ಮಾತು ಬೆಳೆದು ಪತ್ನಿ ವರ್ತನೆಯಿಂದ ಪತಿ ಸಿಟ್ಟಿಗೆದ್ದಿದ್ದನು. ಆದರೆ ಸಂಜೆ ಜೈಪುರಕ್ಕೆ ಹೋಗೋಣ ಎಂದು ಪತ್ನಿಯನ್ನು ನಂಬಿಸಿ ಬಸಾಯಿ ಮೊಹ್ಮದಾಪುರದ ಬಳಿ ಪತಿ ಕರೆದೊಯ್ದನು.

ಸ್ಥಳಕ್ಕೆ ತಲುಪಿದ ಬಳಿಕ ತನ್ನ ಬಳಿ ಇದ್ದ ಗನ್‍ನಿಂದ ಪತ್ನಿಯ ಕತ್ತಿನ ಭಾಗಕ್ಕೆ ಪತಿ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಪತ್ನಿ ಕುಸಿದು ಬಿದ್ದಿದ್ದು, ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದರೆ ಶಿವಾನಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಸ್ಪತ್ರಗೆ ಆಕೆಯನ್ನು ರವಾನಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಶಿವಾನಿ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜ್ಞೆ ಬಂದ ಬಳಿಕ ಶಿವಾನಿ ನಡೆದ ಘಟನೆ ಬಗ್ಗೆ ವಿವರಿಸಿದ್ದು, ಪತಿಯೇ ತನಗೆ ಶೂಟ್ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *