ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

– ಮತ್ತೆ ಕಣಕ್ಕಿಳಿಯುತ್ತಾರಾ ತಾರಾ ವೇಗಿ?

ಲಕ್ನೋ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದಲೇ ಭಾರೀ ಸದ್ದು ಮಾಡುತ್ತಿದ್ದ ಲಕ್ನೂ ಸೂಪರ್‌ ಜೈಂಟ್ಸ್‌ (LSG) ತಂಡದ ಮಯಾಂಕ್‌ ಯಾದವ್‌ (Mayank Yadav) ಪಕ್ಕೆಲುಬು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ಸೂಪರ್‌ ಸಂಡೇ (ಏ.7) ಲಕ್ನೋ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಓವರ್‌ ಬೌಲಿಂಗ್‌ ಮಾಡಿದ ಮಯಾಂಕ್‌, ಯಾವುದೇ ವಿಕೆಟ್‌ ಪಡೆಯದೇ 13 ರನ್‌ ಬಿಟ್ಟುಕೊಟ್ಟರು. ಈ ಓವರ್‌ನ ಮೊದಲ ಎರಡು ಎಸೆತಗಳು ಗಂಟೆಗೆ 140 ಕಿಮೀ ವೇಗದಲ್ಲಿತ್ತು. ಒಂದು ಓವರ್‌ ಬೌಲಿಂಗ್‌ ಬಳಿಕ ತಕ್ಷಣವೇ ಪಕ್ಕೆಲುಬು ಸಮಸ್ಯೆಗೆ ತುತ್ತಾಗಿ ಮೈದಾನ ತೊರೆದರು. ಇದರ ಹೊರತಾಗಿಯೂ ಯಶ್‌ ಠಾಕೂರ್‌‌ ಅವರ ಮಾರಕ ದಾಳಿ, ಕೃನಾಲ್‌ ಪಾಂಡ್ಯ ಅವರ ಸ್ಪಿನ್‌ ಮೋಡಿಯಿಂದ ಕೆ.ಎಲ್‌ ರಾಹುಲ್‌ (KL Rahul) ಬಳಗ 33 ರನ್‌ಗಳ ಗೆಲುವು ಸಾಧಿಸಿತು. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ:
ಮಯಾಂಕ್‌ ಯಾದವ್‌ ಅವರ ಗಾಯದ ಸಮಸ್ಯೆ ಕುರಿತು ಮಾತನಾಡಿದ ಕೃನಾಲ್‌ ಪಾಂಡ್ಯ (Krunal Pandya), ಇದು ಗಂಭೀರವಾದ ಗಾಯವಲ್ಲ. ಆದ್ದರಿಂದ ಮಯಾಂಕ್‌ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮಯಾಂಕ್‌ಗೆ ಏನಾಗಿದೆ ಎಂಬುದು ನಿಖರವಾಗಿ ನನಗೂ ತಿಳಿದಿಲ್ಲ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನ ನೆಟ್ಸ್‌ನಲ್ಲಿ ಚೆನ್ನಾಗಿ ಬೌಲಿಂಗ್‌ ಅಭ್ಯಾಸ ಮಾಡುತ್ತಿದ್ದರು. ನನ್ನೊಂದಿಗೂ ಸಕಾರಾತ್ಮಕವಾಗಿ ಸಂಭಾಷಣೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ:
21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಇತ್ತೀಚೆಗಷ್ಟೇ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಅಂತಲೂ ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

ಐಪಿಎಲ್‌ನಲ್ಲಿ ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
* ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
* ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
* ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
* ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
* ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ