IPL 2025 | ಗುಜರಾತ್‌ಗೆ ಮಾರ್ಕ್ರಮ್‌, ಪೂರನ್‌ ಪಂಚ್‌ – ಲಕ್ನೋಗೆ 6 ವಿಕೆಟ್‌ಗಳ ಸೂಪರ್‌ ಜಯ

– ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ 27 ಕೋಟಿ ಒಡೆಯ

ಲಕ್ನೋ: ಏಡನ್‌ ಮಾಕ್ರಮ್‌ ಹಾಗೂ ನಿಕೋಲಸ್‌ ಪೂರನ್‌ (Nicholas Pooran) ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, 0+.162 ನೆಟ್‌ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಇನ್ನೂ 5 ಪಂದ್ಯಗಳಲ್ಲಿ 2 ಪಂದ್ಯ ಸೋತಿರುವ ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿದರೆ, ಡೆಲ್ಲಿ ಕ್ಯಾಪಿಟಲ್ಸ್‌ ಎಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು. 181 ರನ್‌ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಗೆಲುವು ಸಾಧಿಸಿತು.

181 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಕ್ನೋ ಸೂಪರ್‌ ಜೈಂಟ್ಸ್‌ ಸಹ ಆರಂಭದಲ್ಲ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿತು. ಮೊದಲ ವಿಕೆಟ್‌ಗೆ ರಿಷಭ್‌ ಪಂತ್‌, ಏಡನ್‌ ಮಾರ್ಕ್ರಮ್‌ ಜೋಡಿ 38 ಎಸೆತಗಳಲ್ಲಿ 65 ರನ್‌, 2ನೇ ವಿಕೆಟ್‌ಗೆ ಮಾರ್ಕ್ರಮ್‌ ಮತ್ತು ನಿಕೋಲಸ್‌ ಪೂರನ್‌ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 58 ರನ್‌ ಹಾಗೂ 3ನೇ ವಿಕೆಟಿಗೆ ಆಯುಷ್‌ ಬದೋನಿ, ಪೂರನ್‌ ಜೋಡಿ 25 ಎಸೆತಗಳಲ್ಲಿ 32 ರನ್‌ ಸಣ್ಣ ಜೊತೆಯಾಟ ನೀಡಿದ ಪರಿಣಾಮ ಗೆಲುವು ಲಕ್ನೋ ತಂಡದತ್ತ ವಾಲಿತು.

ಲಕ್ನೋ ಪರ ನಿಕೋಲಸ್‌ ಪೂರನ್‌ 61 ರನ್‌ (34 ಎಸೆತ, 7 ಸಿಕ್ಸರ್‌, 1 ಬೌಂಡರಿ), ಏಡನ್‌ ಮಾರ್ಕ್ರಮ್‌ 58 ರನ್‌ (31 ಎಸೆತ, 1 ಸಿಕ್ಸರ್‌, 9 ಬೌಂಡರಿ), ರಿಷಬ್‌ ಪಂತ್‌ 21 ರನ್‌, ಡೇವಿಡ್‌ ಮಿಲ್ಲರ್‌ 7 ರನ್‌, ಆಯುಷ್‌ ಬದೋನಿ ಅಜೇಯ 28 ರನ್‌, ಅಬ್ದುಲ್‌ ಸಮದ್‌ ಅಜೇಯ 2 ರನ್‌ ಗಳಿಸಿದರು. ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ 2 ವಿಕೆಟ್‌, ರಶೀದ್‌ ಖಾನ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌, ನಾಯಕ ಶುಭಮನ್‌ ಗಿಲ್‌ – ಸಾಯಿ ಸುದರ್ಶನ್‌ ಅವರ ಶತಕದ ಜೊತೆಯಾಟ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 180 ರನ್‌ ಕಲೆಹಾಕಿತ್ತು.

ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ 73 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಕಲೆಹಾಕಿತ್ತು. ಈ ವಿಕೆಟ್‌ ಬೀಳುತ್ತಿದ್ದಂತೆ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು, ಮಧ್ಯಮ ಕ್ರಮಾಂಕದಲ್ಲಿ ಶಾರೂಖ್‌ ಖಾನ್‌ – ರುದರ್ಫೋರ್ಡ್ ಅವರಿಂದ 31 ರನ್‌ಗಳ ಸಣ್ಣ ಜೊತೆಯಾಟ ಕಂಡುಬಂದಿತು.

ಗುಜರಾತ್‌ ಟೈಟಾನ್ಸ್‌ ಪರ ನಾಯಕ ಶುಭಮನ್‌ ಗಿಲ್‌ 60 ರನ್‌ (38 ಎಸೆತ, 1 ಸಿಕ್ಸರ್‌, 6 ಬೌಂಡರಿ), ಸಾಯಿ ಸುದರ್ಶನ್‌ 56 ರನ್‌ (37 ಎಸೆತ, 7 ಬೌಂಡರಿ, 1 ಸಿಕ್ಸರ್‌), ಶಾರೂಖ್‌ ಖಾನ್‌ 11 ರನ್‌, ಜೋಸ್‌ ಬಟ್ಲರ್‌ 16 ರನ್‌, ರುದರ್ಫೋರ್ಡ್ 22 ರನ್‌, ರಶೀದ್‌ ಖಾನ್‌ ಅಜೇಯ 4 ರನ್‌ ಕೊಡುಗೆ ನೀಡಿದರು.

ಲಕ್ನೋ ಸೂಪರ್‌ ಜೈಂಟ್ಸ್‌ ಪರ ಶಾರ್ದೂಲ್‌ ಠಾಕೂರ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಕಿತ್ತರೆ, ದಿಗ್ವೇಶ್‌ ರಾಥಿ, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.