ಹುಬ್ಬಳ್ಳಿ: ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಗಣಿಯ ಬೆರಣಿಗಳಿಂದ ರಸ್ತೆಯಲ್ಲೇ ಚಹಾ ತಯಾರಿಸಿ ಹಂಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫಲಕಗಳನ್ನು ಪ್ರರ್ದಶಿಸಿ, ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಂದೆಡೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಸರ್ಕಾರ, ಮತ್ತೊಂದೆಡೆ ಬೆಲೆ ಹೆಚ್ಚಳ ಮಾಡಿ ಜನರಿಗೆ ಬರೆ ಎಳೆಯುತ್ತಿದೆ. ಈ ಮೂಲಕ ಒಂದು ಕಡೆಯಿಂದ ಕೊಟ್ಟು ಮತ್ತೊಂದೆಡೆಯಿಂದ ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹರಿಹಾಯ್ದರು.
ಈ ವೇಳೆ ಒಲೆ ಹಚ್ಚಲು ಮಹಿಳೆಯರು ಹೆಚ್ಚು ಪ್ರೆಟೋಲ್ ಸುರಿದ ಕಾರಣ ಬೆಂಕಿ ದಗ್ಗನೆ ಹೊತ್ತಿಕೊಂಡಿತು. ಆಗ ಪ್ರತಿಭಟನಾಕಾರರು ಬೆಚ್ಚಿಬೀಳುವಂತಾಯಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ. ಪ್ರತಿಭಟನೆಯಲ್ಲಿ ಮಾಜಿ ಸಂಸದ ಐ.ಜಿ.ಸನದಿ. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ರಾಜಶೇಖರ ಮೆಣಸಿನಕಾಯಿ, ಇಲಿಯಾಸ್ ಮನಿಯಾರ್, ಬಾಬಾಜಾನ್ ಮುದೋಳ, ಇಮ್ರಾನ್ ಯಲಿಗಾರ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಇದ್ದರು.

Leave a Reply