ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

– ಕೇಳಲು ಹೋದ ರೈತನಿಗೆ ನಿನ್ನ ಹಣೆ ಬರಹ ಅಂತ ಹಾರಿಕೆ ಉತ್ತರ

ಚಿಕ್ಕಬಳ್ಳಾಪುರ: ಕಡಿಮೆ ಅವಧಿಯಲ್ಲೇ ಅತ್ಯಧಿಕ ಇಳುವರಿ ಅಂತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರ ಸಲಹೆಯಂತೆ ಖರೀದಿಸಿದ ರಾಗಿ ಬಿತ್ತನೆ ಬೀಜಗಳಿಂದ ನಾಟಿ ಮಾಡಿದ ಪೈರಿನ ತೆನೆಯಲ್ಲಿ ರಾಗಿ ಕಾಳು ಕಟ್ಟದೆ ರೈತರೊಬ್ಬರು ಕಣ್ಣೀರುಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಯಿರಾ ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ಪ್ರತಷ್ಠಿತ ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಂಆರ್ 31305 ಅನ್ನೋ ತಳಿಯ ರಾಗಿ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ್ದರು. ಆದ್ರೆ ಈ ರಾಗಿ ಪೈರು ಬೆಳೆದು 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ. ಈ ಬಗ್ಗೆ ಕೇಳಿದ್ರೆ ಜಿಕೆವಿಕೆ ಯವರು “ನಿನ್ನ ಹಣೆಬರಹ, ನಾವು ಏನೂ ಮಾಡಲಾಗುವುದಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅಂಜಿನಪ್ಪ ಹೇಳಿದ್ದಾರೆ.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಜಿಗೆ 35 ರೂಪಾಯಿಯಂತೆ ಬರೋಬ್ಬರಿ 15 ಕಜಿ ರಾಗಿ ಖರೀದಿ ಮಾಡಿ ಎರಡು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಒಂದು ಕಡೆ ಬರಗಾಲ ಮತ್ತೊಂದೆಡೆ ವಿದ್ಯುತ್ ಗೆ ಬರ. ಈ ನಡುವೆ ಪಾತಾಳಕ್ಕೆ ಕುಸಿದಿರುವ ಅಂರ್ತಜಲದ ನಡುವೆ ಕೊಳವೆ ಬಾವಿಯ ನೀರು ಬಳಸಿ ಎರಡು ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ. ಎರಡು ಎಕರೆ ರಾಗಿ ಬೆಳೆಯಲು ಬಿತ್ತನೆ ಬೀಜ, ಸಾವಯುವ ಗೊಬ್ಬರ, ಸೇರಿದಂತೆ ಅಂದಾಜು 50 ಸಾವಿರ ರೂ. ಹಣ ಖರ್ಚು ಮಾಡಿ 3 ತಿಂಗಳು ಕಾದಿದ್ದಾರೆ. ಆದ್ರೆ ರಾಗಿ ಪೈರು 3 ರಿಂದ ಮೂರೂವರೆ ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದಿದ್ರೂ ರಾಗಿ ತೆನೆಯಲ್ಲಿ ಮಾತ್ರ ರಾಗಿ ಕಾಳುಗಳೇ ಇಲ್ಲ.

ಪ್ರತಿ ಎಕರೆಗೆ 35 ಕ್ವಿಂಟಾಲ್ ಇಳುವರಿ ಬರುತ್ತೆ ಅಂತ ಹೇಳಿದ ಜಿಕೆವಿಕೆ ಸಂಶೋಧಕರು ಈಗ ಕನಿಷ್ಠ ಬೆಳೆ ನೋಡಲು ಬರುತ್ತಿಲ್ಲ. ಸ್ಥಳೀಯ ಕೃಷಿ ಅಧಿಕಾರಿ ಕೂಡ ರಾಗಿ ತೆನೆ ಕಾಳು ಕಟ್ಟದಿರುವ ಬಗ್ಗೆ ಧೃಡೀಕರಣ ಮಾಡಿದ್ದಾರೆ. ಸಂಶೋಧನೆ ಮಾಡಿ ಹೊಚ್ಚ ಹೊಸ ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನ ಅಭಿವೃದ್ಧಿಪಡಿಸೋ ಜಿಕೆವಿಕೆ ನವರು ಕೊಟ್ಟ ಬಿತ್ತನೆ ಬೀಜಗಳೇ ಈ ಪರಿಯಾದ್ರೇ ಮತ್ಯಾರನ್ನ ನಂಬೋದು ಸ್ವಾಮಿ ಅಂತಿದ್ದಾರೆ ನೊಂದ ರೈತ.

Comments

Leave a Reply

Your email address will not be published. Required fields are marked *