ಮದ್ವೆಯಾದ ಮರುದಿನವೇ ಮನೆಗೆ ಕರ್ಕೊಂಡು ಬಂದು ಮಗಳ ಹತ್ಯೆ

-ಪೋಷಕರಿಗೆ ಜೀವಾವಧಿ ಶಿಕ್ಷೆ ಜೊತೆ ದಂಡ

ಹೈದರಾಬಾದ್: ತಮ್ಮ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಮರ್ಯಾದಾ ಹತ್ಯೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಅಪರಾಧಿ ದಂಪತಿಯನ್ನು ಪಚಲಾ ಹರಿಬಾಬು ಮತ್ತು ಸಾಮ್ರಾಜ್ಯಂ ಎಂದು ಗುರುತಿಸಲಾಗಿದೆ. ಇವರು ಗುಂಟೂರು ಜಿಲ್ಲೆಯ ಗೋಗುಲಮುಡಿ ಗ್ರಾಮದ ನಿವಾಸಿಗಳಾಗಿದ್ದು, ಈ ದಂಪತಿಗೆ ದೀಪ್ತಿ (26) ಮತ್ತು ಶ್ರುತಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ದೀಪ್ತಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ದೀಪ್ತಿ ಹೈದರಾಬಾದ್‍ನ ಎಚ್‍ಸಿಎಲ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಗೋದಾವರಿ ಜಿಲ್ಲೆಯ ರಾಜೋಮಂಗಿ ಗ್ರಾಮದ ಅನಂತಪಲ್ಲಿ ಕಿರಣಕುಮಾರ್ ನನ್ನು ಪ್ರೀತಿಸುತ್ತಿದ್ದಳು. ಕಿರಣ್‍ಕುಮಾರ್ ಮತ್ತು ದೀಪ್ತಿ ಬೇರೆ ಬೇರೆ ಜಾತಿಯಾಗಿದ್ದರಿಂದ ತಮ್ಮ ಮದುವೆಗೆ ಪೋಷಕರು ಒಪ್ಪುವುದಿಲ್ಲವೆಂದು ಯಾರಿಗೂ ತಿಳಿಸದಂತೆ ಮದುವೆಯಾಗಲು ನಿರ್ಧರಿಸಿದ್ದರು. ಅದೇ ರೀತಿ ದೀಪ್ತಿ ಮತ್ತು ಕಿರಣ್ ಹೈದರಾಬಾದ್‍ನ ಆರ್ಯ ಸಮಾಜದಲ್ಲಿ ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದರು.

ದೀಪ್ತಿ ಮತ್ತು ಕಿರಣ್ ತಮ್ಮ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು ಎಂಬ ವಿಚಾರ ಪೋಷಕರಿಗೆ ತಿಳಿದಿದೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆಯೇ ಮದುವೆಯಾದ ಮರುದಿನವೇ ಪೋಷಕರು ದಂಪತಿಯನ್ನು ಭೇಟಿಯಾಗಿದ್ದು, ನವಜೋಡಿಯನ್ನು ಗುಂಟೂರಿಗೆ ಕರೆದುಕೊಂಡು ಬಂದಿದ್ದಾರೆ. ಪೂಜೆ ಮಾಡುವ ನೆಪದಲ್ಲಿ ಪೋಷಕರು ತಮ್ಮೊಂದಿಗೆ ಮಗಳು ಮಾತ್ರ ಮನೆಗೆ ಬರಬೇಕೆಂದು ಹೇಳಿ ಕಿರಣ್‍ನನ್ನು ಹೋಟೆಲ್‍ನಲ್ಲಿ ಬಿಟ್ಟು ದೀಪ್ತಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಗಳನ್ನು ಮನೆಗೆ ಕರೆದುಕೊಂಡು ಬಂದ ಕೂಡಲೇ ಆಕೆಯನ್ನು ಮಂಚಕ್ಕೆ ಕಟ್ಟಿದ್ದಾರೆ. ತಾಯಿ ದೀಪ್ತಿಯ ಕೈಗಳನ್ನು ಹಿಡಿದುಕೊಂಡಿದ್ದಾಳೆ. ಆಗ ತಂದೆ ಹರಿಬಾಬು ದುಪ್ಪಟ್ಟದಿಂದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇತ್ತ ಪತಿ ಕಿರಣ್ ಕುಮಾರ್ ಪತ್ನಿಯನ್ನು ಹುಡುಕಿಕೊಂಡು ದೀಪ್ತಿ ಮನೆಗೆ ಬಂದಿದ್ದಾನೆ. ಆಗ ಪತ್ನಿಯ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಕಿರಣ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ತಾವೇ ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದಂಪತಿಗೆ ಜೀವಾವಧಿ ಶಿಕ್ಷೆ ಮತ್ತು 2,000 ರೂ. ದಂಡವನ್ನು ವಿಧಿಸಿದೆ.

Comments

Leave a Reply

Your email address will not be published. Required fields are marked *