ಪ್ರೀತಿಸಿ ಮದ್ವೆಯಾದ ನಂತ್ರ ಮಿಸ್‍ಕಾಲ್‍ನಿಂದಾದ ಗೆಳೆಯನಿಂದ್ಲೇ ಪತಿಯ ಬರ್ಬರ ಹತ್ಯೆ!

ಚಿತ್ರದುರ್ಗ: ಪೋಷಕರ ವಿರೋಧದ ಮಧ್ಯೆಯೇ ಪ್ರೇಮಿಗಳು ಮದುವೆಯಾಗಿದ್ದರು. ಆದರೆ ಮಹಿಳೆಯ ಮೊಬೈಲ್‍ನಿಂದ ಆಕಸ್ಮಿಕವಾಗಿ ಮಿಸ್ ಕಾಲ್ ಮೂಲಕ ಗೆಳೆಯನಾಗಿ ಎಂಟ್ರಿಯಾದ ಯುವಕನೊಬ್ಬ, ಆಕೆಯ ಪತಿಯನ್ನೇ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ಬಿ.ಎಲ್.ಗೌಡ ಲೇಔಟ್‍ನ ಹಳೇ ಬೆಂಗಳೂರು ರಸ್ತೆ ಬಳಿ ನಡೆದಿದೆ.

ಮಾರ್ಚ್ 21 ರಂದು ಚಿಕ್ಕಪೇಟೆ ಬಡಾವಣೆಯ ಎಸ್.ಕೆ ನವೀನ್ ನ ಬರ್ಬರವಾಗಿ ಹತ್ಯೆಯಾಗಿತ್ತು. ಕೇವಲ ಒಂದು ವಾರ ಕಳೆಯುವಷ್ಟರಲ್ಲೇ ಕೊಲೆ ಪ್ರಕರಣವನ್ನು ಚಿತ್ರದುರ್ಗ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮೂಲದ ಅಕ್ಷಯ್, ಕಿರಣ್ ಹಾಗೂ ಕೃಷ್ಣ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಮೃತ ನವೀನ್ ಎರಡೂವರೆ ವರ್ಷದ ಹಿಂದೆ ಸಾನಿಯಾ ಅಲಿಯಾಸ್ ಸುಮಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಕೆಲ ತಿಂಗಳ ಹಿಂದೆ ಸಾನಿಯಾ ಕೈಯಿಂದ ಮಿಸ್ಸಾಗಿ ಬೆಂಗಳೂರಿನ ಅಕ್ಷಯ್ ಗೆ ಮಿಸ್ ಕಾಲ್ ಹೋಗಿತ್ತು. ಆಗಿನಿಂದ ಅವರಿಬ್ಬರು ಪರಿಚಿತರಾಗಿ ಸ್ನೇಹಿತರಾಗಿದ್ದು, ಅಕ್ಷಯ್ ನನ್ನು ನವೀನ್‍ಗೂ ಪರಿಚಯಿಸಿದ್ದಳು. ಆದರೆ ಕೆಲ ದಿನಗಳ ಹಿಂದೆ ಅಕ್ಷಯ್ ಅನುಚಿತವಾಗಿ ಸಂದೇಶ ಮಾಡುತ್ತಿದ್ದು, ಅದನ್ನ ತನ್ನ ಪತಿಯ ಗಮನಕ್ಕೂ ತರಲಾಗಿತ್ತು. ಹೀಗಾಗಿ ಸಾನಿಯಾ ಪತಿ ನವೀನ್ ಅಕ್ಷಯ್ ಗೆ ವಾರ್ನ್ ಮಾಡಿದ್ದನು. ಬಳಿಕ ತಪ್ಪಾಯ್ತು ಎಂದು ಸಾರಿ ಕೇಳಿದ್ದ ಅಕ್ಷಯ್, ಒಳೊಳಗೆ ಸ್ಕೆಚ್ ಹಾಕಿ ಚಳ್ಳಕೆರೆ ಗೇಟ್ ಬಳಿಗೆ ನವೀನ್ ನನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎಸ್.ಪಿ ಡಾ.ಅರುಣ್ ಹೇಳಿದ್ದಾರೆ.


ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ನವೀನ್ ಪತ್ನಿ ಸುಮಾಳ ತಪ್ಪಿಲ್ಲ ಎಂದು ಕಂಡುಬರುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಮಿಸ್ ಕಾಲ್ ಮೂಲಕ ಸಾನಿಯಾಗೆ ಪರಿಚಯವಾಗಿದ್ದ ಅಕ್ಷಯ್ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾದರೂ ಹೇಗೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಸಾನಿಯಾ ಮತ್ತು ಅಕ್ಷಯ್ ಆತ್ಮೀಯವಾಗಿ ಚಾಟ್ ಮಾಡಿದ್ದು, ಟಿಕ್ ಟಾಕ್ ಮಾಡಿದ್ದ ವಿಡಿಯೋಗಳು ಕೂಡ ಎಲ್ಲೆಡೆ ಬಹಿರಂಗವಾಗಿವೆ. ಹೀಗಾಗಿ ಹತ್ಯೆಯ ಹಿಂದೆ ಸಾನಿಯಾಳ ಪಾತ್ರವೂ ಇರುವ ಅನುಮಾನವಿದೆ. ಈ ಬಗ್ಗೆಯೂ ಕೂಲಂಕುಷ ತನಿಖೆ ಆಗಲಿ ಎಂದು ನವೀನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಾನಿಯಾರನ್ನು ಪ್ರಯತ್ನಿಸಲಾಗುತ್ತಿದೆ.

ಪ್ರೇಮಜೋಡಿಗಳ ನಡುವೆ ಗೆಳೆಯನಾಗಿ ಎಂಟ್ರಿಯಾದ ಅಕ್ಷಯ್, ನಿಜಕ್ಕೂ ವಿಲನ್ ಆಗಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಮೂವರನ್ನು ಬಂಧಿಸಿರುವ ಪೊಲೀಸರು ಇನ್ನುಳಿದ ಮೂವರಿಗಾಗಿ ಜಾಲ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ. ಬಡಾವಣೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *