ಪ್ರೀತ್ಸಿ ಮದ್ವೆಯಾದವ್ಳು ತವರು ಸೇರಿದ್ದಕ್ಕೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ

ಬೆಂಗಳೂರು: ಪ್ರೀತಿಸಿ ಮದುವೆಯಾದವಳು ತವರು ಮನೆ ಸೇರಿದ್ದಕ್ಕೆ ಪತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಂಗಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮೂಲತಃ ಚನ್ನಪಟ್ಟಣದವರಾದ ರಂಗಸ್ವಾಮಿ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ಫೇಸ್‍ಬುಕ್‍ನಲ್ಲಿ ಸೋಮವಾರ ಬೆಳಗ್ಗೆ 12 ಗಂಟೆ ಸುಮಾರಿಗೆ ಈ ವಿಡಿಯೋ ನೋಡಿದ್ದ ರಂಗಸ್ವಾಮಿ ಸ್ನೇಹಿತರು ಆತಂಕಗೊಂಡಿದ್ದರು. ಕೂಡಲೇ ಕೆ.ಆರ್ ಪುರಂ ಪ್ರಿಯದರ್ಶಿನಿ ಲೇಔಟ್‍ನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ರಂಗಸ್ವಾಮಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನು.

ರಂಗಸ್ವಾಮಿ ಉಸಿರಾಟ ಇದ್ದಿದ್ದನ್ನು ಗಮನಿಸಿದ ಸ್ನೇಹಿತರು ಸ್ಥಳೀಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ರಂಗಸ್ವಾಮಿ ಪತ್ನಿ ಬಿಟ್ಟು ಹೋಗಿದ್ದೇ ಆತನ ಈ ಸ್ಥಿತಿಗೆ ಕಾರಣ. ರಂಗಸ್ವಾಮಿಗೆ ಚನ್ನರಾಯಪಟ್ನದ ತನ್ನದೇ ಮನೆ ಸಮೀಪದ ಭವ್ಯಶ್ರೀ ಜೊತೆಗೆ ಪ್ರೇಮಾಂಕುರವಾಗಿತ್ತು. ಬರೋಬ್ಬರಿ 5 ವರ್ಷಗಳು ಪ್ರೀತಿಸಿದ್ದ ಜೋಡಿ ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದರು.

ಭವ್ಯಶ್ರೀ ಎಂಬಿಬಿಎಸ್ ಅರ್ಧದಲ್ಲೇ ನಿಲ್ಲಿಸಿ ರಂಗಸ್ವಾಮಿ ಜೊತೆ ಬೆಂಗಳೂರಿಗೆ ಬಂದು ಪ್ರತ್ಯೇಕವಾಗಿ ಕೆ.ಆರ್ ಪುರಂನ ಪ್ರಿಯದರ್ಶಿನಿ ಲೇಔಟನ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೇಬಲ್ ನೋಡಿಕೊಳ್ಳುತ್ತಿದ್ದ ರಂಗಸ್ವಾಮಿ ತನಗಿದ್ದ ಆದಾಯದಲ್ಲಿ ಪತ್ನಿಯನ್ನು ಆಕೆಯ ಇಚ್ಚೆಯಂತೆ ನೋಡಿಕೊಳ್ಳುತ್ತಿದ್ದನು. ಆದರೆ ಕಳೆದ ಆರು ತಿಂಗಳ ಹಿಂದೆ ಅವರಿಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಮೂರು ವರ್ಷಗಳಿಂದ ಸಂಪರ್ಕದಲ್ಲಿರದ ಪತ್ನಿ ಪೋಷಕರು ಮತ್ತೆ ಮನೆಗೆ ಬರುವುದು ಹೋಗುವುದನ್ನು ಮಾಡುತ್ತಿದ್ದರು. ಅಂದಿನಿಂದ ಪತಿ ಪತ್ನಿ ನಡುವೆ ವಿರಸವುಂಟಾಗಿತ್ತು.

ಇದೇ ವಿಚಾರವಾಗಿ ನೊಂದಿದ್ದ ರಂಗಸ್ವಾಮಿ ಖಿನ್ನತೆಗೆ ಒಳಗಾಗಿದ್ದನು. ರಂಗಸ್ವಾಮಿ ಪೋಷಕರು ಸಹ ದಂಪತಿ ತಮ್ಮಿಷ್ಟದಂತೆ ಬದುಕಲಿ ಎಂದು ಸುಮ್ಮನಾಗಿದ್ದರು. ಸೊಸೆಯ ಇಚ್ಚೆಯಂತೆ ಪ್ರತ್ಯೇಕವಾಗಿರಲು ಸಮ್ಮತಿಸಿದ್ದರು. ಆದರೆ ಮತ್ತೆ ಭವ್ಯಶ್ರೀ ಪೋಷಕರು ಸಂಪರ್ಕ ಸಾಧಿಸಿದಾಗಿನಿಂದ ರಂಗಸ್ವಾಮಿ ಸಂಸಾರದಲ್ಲಿ ತಾಳ ತಪ್ಪಿತ್ತು. ಪತ್ನಿ ಭವ್ಯಶ್ರೀ ಪೋಷಕರೇ ತನ್ನಿಂದ ಪತ್ನಿಯನ್ನು ದೂರ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ. ರಂಗಸ್ವಾಮಿ ಪರಿಸ್ಥಿತಿ ಕಂಡು ಇಡೀ ಕುಟುಂಬಸ್ಥರು ಹಾಗೂ ಸ್ನೇಹಿತರು ಆತಂಕದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *