ಪ್ರೀತಿಸಿ ಮದ್ವೆಯಾಗಿ ಮಕ್ಕಳಾದ್ಮೇಲೆ ಪತ್ನಿಯ ಸೋದರಿಗೆ ಕಣ್ಣಾಕ್ದ

-ಬಾವನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಹೈದರಾಬಾದ್: ಸಹೋದರಿಯ ಪತಿ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಕುಮ್ಮರಿಪಲಂನ ವೇಣುಗೋಲಸ್ವಾಮಿ ದೇವಸ್ಥಾನ ಬೀದಿಯಲ್ಲಿ ನಡೆದಿದೆ. ಮೌನಿಕಾ ಸಹೋದರಿ ಪತಿ ಸುಧಾರಕ್ ಕಿರುಕುಳದಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯಕ್ಕೆ ಈತನ ವಿರುದ್ಧ ಪತ್ನಿಯೇ ದೂರು ದಾಖಲಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಏನಿದು ಪ್ರಕರಣ?
ಕರ್ನಾಟಕದ ಚಂಡಮಾರುತದಿಂದ ಬೇಸತ್ತು ಮೌನಿಕಾ ಕುಟುಂಬವು ಜೀವನೋಪಾಯಕ್ಕಾಗಿ ಓಂಗೋಲ್‍ಗೆ ಹೋಗಿ ನೆಲೆಸಿದ್ದರು. ಯುವತಿಯ ತಂದೆ ನಾಗೇಂದ್ರ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಒಟ್ಟಿಗೆ ವಾಸಿಸುತ್ತಿದ್ದರು. ಮೌನಿಕಾ ತಂದೆ ಕೊಠಪಟ್ಟಣಂ ಜಿಲ್ಲೆಯ ಚಿಂತಾಲಾ ಮೂಲದ ಸುಧಾಕರ್ ಬಾಬು ಎಂಬವನಿಗೆ ಮನೆ ಬಾಡಿಗೆಗೆ ನೀಡಿದ್ದರು. ಸುಧಾರಕ್ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ದಿನಕಳೆದಂತೆ ಮನೆ ಮಾಲೀಕರ ಎರಡನೇ ಮಗಳು ಮಾಧವಿಯನ್ನು ಪ್ರೀತಿಸುತ್ತಿದ್ದನು.

ಇಬ್ಬರ ಕುಟುಂಬದವರು ಒಪ್ಪಿಗೆ ನೀಡಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇದಾದ ನಂತರ ಸುಧಾಕರ್ ತನ್ನ ಪತ್ನಿಯ ತಂಗಿ ಮೌನಿಕಾಳನ್ನು ಮದುವೆಯಾಗಲು ಯೋಜಿಸಿದ್ದನು. ಮೌನಿಕಾ ಇತ್ತೀಚೆಗೆ ತಾನೇ ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದಳು. ಒಂದು ದಿನ ಸುಧಾರಕ್ ಮೌನಿಕಾಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಆಕೆ ಈತನ ಪ್ರಸ್ತಾಪವನ್ನು ನಿರಾಕರಿಸಿದ್ದಳು. ಇದರಿಂದ ಕೋಪಕೊಂಡ ಬಾವ ಸುಧಾಕರ್ ಕಿರುಕುಳ ನೀಡಲು ಶುರು ಮಾಡಿದ್ದನು.

ಮೌನಿಕಾಳ ಪೋಷಕರು ಕೂಡ ಸುಧಾಕರ್‌ಗೆ ಮೌನಿಕಾಳಿಂದ ದೂರವಿರುವಂತೆ ಎಚ್ಚರಿಕೆ ಕೂಡ ನೀಡಿದರು. ಆದರೂ ಆತ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದನು. ಅಷ್ಟೇ ಅಲ್ಲದೆ ಮೌನಿಕಾಗೆ ಬರುತ್ತಿದ್ದ ಮದುವೆ ಸಂಬಂಧಗಳನ್ನು ಹಾಳು ಮಾಡುತ್ತಲೇ ಇದ್ದನು. ಈ ಎಲ್ಲ ಸಂಗತಿಗಳಿಂದ ಬೇಸರಗೊಂಡ ಮೌನಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪೋಷಕರು ದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದರು. ಇತ್ತ ಮೌನಿಕಾ ಮೃತಪಟ್ಟಿದ್ದಾಳೆಂದು ತಿಳಿದ ಸುಧಾಕರ್ ಅಲ್ಲಿಗೆ ಬಂದು, ಯಾವುದೇ ಪೊಲೀಸ್ ದೂರು ದಾಖಲಿಸದಂತೆ ಅವರ ಕುಟುಂಬದವರಿಗೆ ಎಚ್ಚರಿಕೆ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಗೆ ಸುಧಾಕರ್ ಪತ್ನಿ ಮತ್ತು ಮೌನಿಕಾ ಮತ್ತೊಬ್ಬ ಸಹೋದರಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ನನ್ನ ಪತಿ ನೀಡುತ್ತಿದ್ದ ಕಿರುಕುಳದಿಂದಾಗಿ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಧವಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯಕ್ಕೆ ಪೊಲೀಸರು ದೂರು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಈ ಕುರಿತು ತನಿಖೆಯನ್ನ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *