ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ ದಿವ್ಯಾ ಶ್ರೀಧರ್ (Divya Sridhar) ಅವರ ಪತಿ ಅಮ್ಜಾದ್ ಖಾನ್ (Amjad Khan) ಅವರನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದಾರೆ (Arrest). ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ, ದಿವ್ಯಾ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದರು. ಈ ದೂರಿನ ಅನ್ವಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮೊನ್ನೆಯಷ್ಟೇ ಆಸ್ಪತ್ರೆಯಿಂದ ಸೀದಾ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ದಿವ್ಯಾ ಶ್ರೀಧರ್, ತನಗೆ ಈ ರೀತಿ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನಿಸಿದ್ದರು. ಪತಿ ಜೊತೆ ಜೋರು ಮಾತಿಗೆ ನಿಂತಿದ್ದರು. ದಿವ್ಯಾ ಶ್ರೀಧರ್ ಕೂಗಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಅಮ್ಜಾದ್ ಖಾನ್ ಅದನ್ನು ಮಾಧ್ಯಮಗಳಿಗೆ ನೀಡಿದ್ದರು ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

ಮಾಧ್ಯಮಗಳ ಜೊತೆ ಹಂಚಿಕೊಂಡಿರುವ ವಿಡಿಯೋದಲ್ಲಿ ‘ನೀನು ಯಾಕೆ ನನಗೆ ಮೋಸ ಮಾಡಿ ಮದುವೆಯಾದೆ. ಸುಳ್ಳು ಯಾಕೆ ಹೇಳಬೇಕಿತ್ತು’ ಎಂದು ದಿವ್ಯಾ ಕೇಳುತ್ತಾರೆ. ‘ಮೋಸ ಮಾಡಿದ್ದು ನಾನಲ್ಲ, ನೀನು. ನೀನೇ ನನ್ನನ್ನು ಪ್ರೀತಿಸಿ ಮದುವೆ ಆಗಿದ್ದು. ನಾನು ಮೋಸ ಮಾಡಿಲ್ಲ. ನೀನೇ ನನಗೆ ಮೋಸ ಮಾಡುತ್ತಿರುವದು’ ಎಂದು ಅಮ್ಜಾದ್ ಖಾನ್ ಹೇಳುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಮೋಸದ ಆರೋಪ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿತ್ತು.

ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿತ್ತು. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿ, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದರು.

ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.

ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಪ್ರಗ್ನೆಂಟ್ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.

Leave a Reply