ಅಪ್ರಾಪ್ತೆ ಪ್ರೇಯಸಿಯ ನಿರ್ಧಾರದಿಂದ ಸಿಟ್ಟಾಗಿ ಕೊಂದೇ ಬಿಟ್ಟ

– ವಾಟರ್ ಟ್ಯಾಂಕ್ ನಿಯಂತ್ರಣ ಕೊಠಡಿಯಲ್ಲಿ ಕೊಲೆ
– ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಹುಡುಗಿ ಮಿಸ್ಸಿಂಗ್
– ಗದಗ್ ಮೂಲದ ಆರೋಪಿ

ಪಣಜಿ: ಮಾಜಿ ಪ್ರಿಯಕರನೊಬ್ಬ ಅಪ್ರಾಪ್ತೆ ಗೆಳತಿಯ ನಿರ್ಧಾರದಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವ ಘಟನೆ ಗೋವಾದಲ್ಲಿ ನಡೆದಿದೆ.

ಈ ಘಟನೆ ಪೋಂಡಾ ಪಟ್ಟಣದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಮನ್ಸೂರ್ ಹುಸೇನ್ ಶೇಖ್ (22) ಎಂದು ಗುರುತಿಸಲಾಗಿದೆ. ಈತ ತನ್ನ 17 ವರ್ಷದ ಪ್ರಿಯತಮೆಯನ್ನು ಕೊಲೆ ಮಾಡಿದ್ದಾನೆ.

ಏನಿದು ಪ್ರಕರಣ?
ಮೃತ ಹುಡುಗಿ ಗೋವಾದ ಉಸ್ಗಾವೊ ನಿವಾಸಿಯಾಗಿದ್ದು. ಏಪ್ರಿಲ್ 13 ರಂದು ಹುಡುಗಿ ಪೋಂಡಾದ ಉಪ ಜಿಲ್ಲಾಸ್ಪತ್ರೆಗೆ ಹೋಗಲು ಮನೆಯಿಂದ ಹೊರಟಿದ್ದಾಳೆ. ಆದರೆ ಆಕೆ ಮತ್ತೆ ಹಿಂದಿರುಗಿ ಮನೆಗೆ ವಾಪಸ್ ಬಂದಿಲ್ಲ. ಆಕೆಯ ಕುಟುಂಬದವರು ಆತಂಕಗೊಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಹುಡುಗಿ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೋಂಡಾ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದ್ದಾರೆ.

ಇತ್ತ ಗೋವಾದ ಬೋರಿಮ್ ಪ್ರದೇಶದಲ್ಲಿ ಗೋಡಂಬಿ ಕೃಷಿಕರು ತೋಟದಲ್ಲಿ ಬಿದ್ದ ಗೋಡಂಬಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದರು. ಆಗ ಕೃಷಿಕರಿಗೆ ಏನೋ ದುರ್ವಾಸನೆ ಬಂದಿದೆ. ನಂತರ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿ ದುರ್ವಾಸನೆ ಬರುತ್ತಿರುವುದು ತಿಳಿದುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಯಲ್ಲಿದ್ದ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹ ಅಪ್ರಾಪ್ತೆಯದ್ದಾಗಿದ್ದು, ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹುಡುಗಿಯಾಗಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆಕೆಯ ಮಾಜಿ ಗೆಳೆಯ ಕೊಲೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ 17 ವರ್ಷದ ಹುಡುಗಿ ಎಂದು ತಿಳಿದುಬಂದಿದೆ. ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆಯ ಮನ್ಸೂರ್ ಹುಸೇನ್ ಶೇಖ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 13 ರಂದು ಮೃತ ಹುಡುಗಿ ಮತ್ತು ಆರೋಪಿ ಶೇಖ್ ಬೋರಿಮ್‍ಗೆ ಹೋಗಿದ್ದರು. ಆರೋಪಿ ಮತ್ತು ಮೃತ ಹುಡುಗಿ ಇಬ್ಬರು ಈ ಹಿಂದೆ ಪ್ರೀತಿಸುತ್ತಿದ್ದರು. ಮಾತನಾಡಬೇಕು ಎಂದು ಕರೆದುಕೊಂಡು ಹೋಗಿದ್ದ. ಆದರೆ ಮೃತ ಹುಡುಗಿ ಅವನಿಂದ ದೂರವಾಗಿದ್ದಳು. ಈ ನಿರ್ಧಾರದಿಂದ ಆರೋಪಿ ಕೋಪಗೊಂಡಿದ್ದನು. ಅಲ್ಲದೇ ಪ್ರೇಯಸಿಯ ನಿರ್ಧಾರವನ್ನು ನಿರಾಕರಿಸಿ, ಆಕೆಯ ಮನವೊಲಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಮೃತ ಹುಡುಗಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕೋಪಗೊಂಡು ಆರೋಪಿ ಶೇಖ್ ವಾಟರ್ ಟ್ಯಾಂಕ್‍ನ ನಿಯಂತ್ರಣ ಕೊಠಡಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆರೋಪಿ ಗೋವಾದ ಹವೇಲಿ-ಕರ್ಟಿಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *