30 ಅಡಿ ಕಂದಕಕ್ಕೆ ಬಿದ್ದ ಲಾರಿ- ನಾಲ್ವರು ಪಾರು

ಚಿಕ್ಕಮಗಳೂರು: ಕುರಿ ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಸಿಗದಾಳ್ ಘಾಟಿಯಲ್ಲಿ ಈ ಅಪಘಾತ ನಡೆದಿದ್ದು ಕೂದಲೆಳೆ ಅಂತರದಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುರಿ ಗೊಬ್ಬರವನ್ನ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಸಿಗದಾಳ್ ಘಾಟಿಯ ತಿರುವಿನಲ್ಲಿ ಲಾರಿಯನ್ನ ಟರ್ನ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಕಂದಕಕ್ಕೆ ಲಾರಿ ಪಲ್ಟಿಯಾಗಿದೆ. ಲಾರಿ ಕಂದಕಕ್ಕೆ ಪಲ್ಟಿಯಾಗುತ್ತಿದ್ದಂತೆ ಲಾರಿಯಲ್ಲಿದ್ದ ಗೊಬ್ಬರದ ಚೀಲಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಲಾರಿ ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಲಾರಿಯಲ್ಲಿ ಚಾಲಕ ಸೇರಿ ನಾಲ್ವರು ಪ್ರಯಾಣ ಮಾಡುತ್ತಿದ್ದರು. ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರಿಗೂ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹರಿಹರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *