ಅಪಘಾತದಲ್ಲಿ 2 ಕಾಲು ಕಳೆದುಕೊಂಡ ಚಾಲಕನಿಗೆ ಲಾರಿ ಚಾಲಕರ ಸಂಘದಿಂದ ಧನಸಹಾಯ

ಮಡಿಕೇರಿ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿ ಲಾರಿ ಅಪಘಾತದಲ್ಲಿ 2 ಕಾಲುಗಳನ್ನು ಕಳೆದುಕೊಂಡ ಚಾಲಕನಿಗೆ ಧನಸಹಾಯ ಮಾಡುವ ಮೂಲಕ ಲಾರಿ ಚಾಲಕರ ಸಂಘ ಮಾನವೀಯತೆ ಮೆರೆದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ರಮೇಶ್ ಅಪಘಾತದಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದರು. ಅಲ್ಲದೆ ರಮೇಶ್ ಅವರು ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ಮಿನಿ ಲಾರಿ ಚಾಲಕ ಹಾಗೂ ಮಾಲೀಕರ ಸಂಘ ಧನಸಹಾಯ ಮಾಡಿದೆ. ಸಂಘದ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಬೆಟ್ಟದಪುರ ಬಳಿ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಸಂದರ್ಭದಲ್ಲಿ ಅಮ್ಮತ್ತಿಯ ಚಾಲಕ ರಮೇಶ್ ತಮ್ಮ ಅವರ ಎರಡು ಕಾಲುಗಳು ತುಂಡಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಿದ್ದಾಪುರದ ಲಾರಿ ಮಾಲೀಕನ ಸಹಕಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಅಮ್ಮತಿಯ ತನ್ನ ಬಾಡಿಗೆ ಮನೆಯಲ್ಲಿ ವಾಸವಾಗಿ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದರು.

ಲಾರಿ ಚಾಲನೆ ಮಾಡಿ ದುಡಿದು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ರಮೇಶ್ ಇದೀಗ ದಾನಿಗಳ ಸಹಕಾರವನ್ನು ಬಯಸುತ್ತಿದ್ದಾರೆ. ಮಡಿಕೇರಿ ತಾಲೂಕು ಲಾರಿ ಹಾಗೂ ಮಿನಿ ಲಾರಿ ಚಾಲಕರು ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಶಿವಬೋಪಣ್ಣ ನೇತೃತ್ವದಲ್ಲಿ ಪದಾಧಿಕಾರಿಗಳು ಅಮ್ಮತಿಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದಲ್ಲದೆ ಧನ ಸಹಾಯ ನೀಡಿದರು.

ಸಂಘದ ಗೌರವ ಅಧ್ಯಕ್ಷ ತಿಮ್ಮಪ್ಪ ರೈ ಮಾತನಾಡಿ, ಅಪಘಾತದಲ್ಲಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರಮೇಶನ ಕುಟುಂಬಕ್ಕೆ ಸಂಘದ ವತಿಯಿಂದ ನೆರವಾಗಿದ್ದು, ಜಿಲ್ಲೆಯ ದಾನಿಗಳು ರಮೇಶ್ ಅವರ ಕುಟುಂಬಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು.

Comments

Leave a Reply

Your email address will not be published. Required fields are marked *