ಕನಕಪುರ ಬಂಡೆಗೆ ಶುರುವಾಯ್ತು ಹೊಸ ಟ್ರಬಲ್

-ಟ್ರಬಲ್ ಶೂಟರ್ ಸಂಧಾನಕ್ಕೆ ಜಗ್ಗದ ಬಳ್ಳಾರಿ ಬೇಗುದಿ

ಬಳ್ಳಾರಿ: ಕಾಂಗ್ರೆಸ್ ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಟ್ರಬಲ್ ಬಂದಾಗಲೆಲ್ಲಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ ಬಳ್ಳಾರಿ ಕಾಂಗ್ರೆಸ್ ಕೆಲ ಸಮಸ್ಯೆಗಳನ್ನು ಬಗೆಹರಿಸೋದೆ ಟಬ್ರಲ್ ಶೂಟರ್ ಗೆ ದೊಡ್ಡ ತಲೆನೋವಾಗಿದೆ.

ಬಳ್ಳಾರಿ ಕಾಂಗ್ರೆಸ್ ಅಂದ್ರೆ ಒಡೆದ ಮನೆ, ಅಲ್ಲಿ ಬಂಡಾಯ, ಕಿತ್ತಾಟ, ಬಡಿದಾಟ ಸಾಮಾನ್ಯ ಅನ್ನೋ ಮಾತು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಇದಕ್ಕಂತಲೇ ರಾಜ್ಯ ನಾಯಕರು ಬಳ್ಳಾರಿ ಕೋಟೆಯ ಭಿನ್ನಮತ ಶಮನಗೊಳಿಸಲು ಪಕ್ಷದ ಟ್ರಬಲ್ ಶೂಟರ್ ಸಚಿವ ಡಿಕೆಶಿ ಹೆಗಲಿಗೆ ಭಾರ ಹಾಕಿತ್ತು. ಸದ್ಯಕ್ಕೆ ಡಿಕೆ ಶಿವಕುಮಾರ್ ಹಾಕಿದ ಯಾವ ಪ್ಲಾನ್ ವರ್ಕೌಟ್ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.


ಒಂದೆಡೆ ಶಾಸಕ ಭೀಮಾನಾಯ್ಕ್, ಪಕ್ಷದ ನಾಯಕರು ಮಾತು ಕೇಳತ್ತಿಲ್ಲ. ಇನ್ನೊಂದೆಡೆ ಶಾಸಕ ಗಣೇಶ್ ಜೈಲಿನಲ್ಲಿರುವುದು ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಮಧ್ಯೆ ಕ್ಷೇತ್ರದ ಉಸ್ತುವಾರಿ ಹೊಣೆ ಹೊತ್ತಿರುವ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣರೆಡ್ಡಿ ಇದೀಗ ಅಸಮಧಾನಗೊಂಡಿರುವುದು ಕಾಂಗ್ರೆಸ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬಳ್ಳಾರಿ ಬೈ ಎಲೆಕ್ಷನ್ ವೇಳೆ ಪಕ್ಷದಲ್ಲಿನ ಭಿನ್ನಮತ ಬಂಡಾಯ ಶಮನಗೊಳಿಸಿ ಡಿ.ಕೆ.ಶಿವಕುಮಾರ್ ಸಕ್ಸಸ್ ಕಂಡಿದ್ದರು. ಅಂದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ಬಾರಿ ಮಾತ್ರ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಬಂಡಾಯ ಶಮನಗೊಳ್ಳುವಂತೆ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ನಾಮಪತ್ರ ಸಲ್ಲಿಕೆ ದಿನ ನಡೆಸಿದ ಸಂಧಾನ ಪ್ಲಾಪ್ ಆಗಿದೆ ಎಂಬ ಮಾತುಗಳು ಬಳ್ಳಾರಿ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಫೋನ್ ಮೂಲಕ ಸೂಚನೆ ನೀಡಿದರೂ ಸ್ಥಳೀಯ ಕೈ ನಾಯಕರು ಕ್ಯಾರೆ ಎನ್ನುತ್ತಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

Comments

Leave a Reply

Your email address will not be published. Required fields are marked *