ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

ನವದೆಹಲಿ: ಷೇರು ಮಾರುಕಟ್ಟೆ ವಂಚನೆ ಪ್ರಕರಣದಲ್ಲಿ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್‌ ಕ್ಲೀನ್ ಚಿಟ್ ನೀಡಿದೆ.

ಮಾಧವಿ ಪುರಿ ಬುಚ್ ಅವರ ವಿರುದ್ಧ ಹಿಂಡೆನ್‌ಬರ್ಗ್-ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರುಗಳನ್ನು ಭಾರತೀಯ ಲೋಕಪಾಲ್ ವಜಾಗೊಳಿಸಿದೆ. ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಆರೋಪಗಳಲ್ಲಿ ಯಾವುದೇ ಅರ್ಹತೆ ಇಲ್ಲ. ಊಹೆಯಿಂದ ಕೂಡಿದಂತಿದೆ. ಯಾವುದೇ ಪರಿಶೀಲಿಸಬಹುದಾದ ಪುರಾವೆಗಳ ಕೊರತೆಯಿದೆ ಎಂದು ಲೋಕಪಾಲ್‌ ಹೇಳಿದೆ.

ಬುಧವಾರ ಹೊರಡಿಸಿದ ಆದೇಶದಲ್ಲಿ, ದೂರುಗಳು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ತನಿಖೆಗೆ ಅಗತ್ಯವಾದ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಹೇಳಲಾಗಿದೆ. ಆರೋಪಗಳು ಹೆಚ್ಚಾಗಿ ಊಹೆಗಳಿಂದ ಕೂಡಿವೆ. ಹೀಗಾಗಿ, ದೂರುಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಲೋಕಪಾಲ್‌ ತಿಳಿಸಿದೆ.

ಹಿಂಡೆನ್‌ಬರ್ಗ್‌ ವರದಿ ಆಧರಿಸಿ ಮಾಧವಿ ವಿರುದ್ಧ ಪ್ರತ್ಯೇಕವಾಗಿ ಎರಡು ದೂರುಗಳು ದಾಖಲಾಗಿದ್ದವು. ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆಂದು ಹಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿತ್ತು. ಇದನ್ನು ಮಾಧವಿ ಅವರು ಅಲ್ಲಗಳೆದಿದ್ದರು.