ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ

ಬೆಂಗಳೂರು/ದಾವಣಗೆರೆ: ಲೋಕಾಯುಕ್ತ ಪೊಲೀಸರ (Lokayukta Police) ಕೈಗೆ ಪುತ್ರ ಪ್ರಶಾಂತ್‌ ಮಾಡಾಳ್‌ (Prashanth Madal) ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದ ಬೆನ್ನಲ್ಲೇ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ತಲೆಮರೆಸಿಕೊಂಡಿದ್ದಾರೆ.

ಗುರುವಾರ ರಾತ್ರಿ ದಾವಣಗೆರೆಯ ಮನೆಯಿಂದ ಹೊರಗೆ ಹೋದವರು ಅಜ್ಞಾತ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.  ಎಫ್‍ಐಆರ್‌ನಲ್ಲಿ ಎ-1 ಆರೋಪಿಯಾಗಿರುವ ಶಾಸಕರಿಗೆ ಲೋಕಾಯುಕ್ತ ನೋಟಿಸ್‌ ಜಾರಿ ಮಾಡಿದೆ.

ಸದ್ಯ ಬಂಧನ ಭೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನು (Anticipatory bail) ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (KSDL) ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಗನ ಲಂಚಕಾಂಡಕ್ಕೂ ತಮಗೂ ಸಂಬಂಧವಿಲ್ಲ. ನನ್ನ ವಿರುದ್ಧ ಷಡ್ಯಂತ್ರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಈ ಬಾರಿ ಹೊಸಬರಿಗೆ 50 ಟಿಕೆಟ್?

ಮಾಡಾಳ್ ಲಂಚ ಪ್ರಕರಣ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ. ಪ್ರಸಕ್ತ ಬೆಳವಣಿಗೆಯಿಂದ ಹೈಕಮಾಂಡ್ ಗರಂ ಆಗಿದೆ. ಮೂಲಗಳ ಪ್ರಕಾರ ಮಾಡಾಳ್ ವಿರೂಪಾಕ್ಷಪ್ಪರನ್ನು ಪಕ್ಷದಿಂದಲೇ ಉಚ್ಛಾಟಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಯಾವುದೇ ಕ್ಷಣದಲ್ಲಿ ಆದೇಶ ಪ್ರಕಟವಾಗಬಹುದು ಎಂದು ಹೇಳಲಾಗುತ್ತಿದೆ.

ತಮ್ಮ ರಾಜಕೀಯ ಜೀವನ ಕೊನೆ ಹಂತದಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ, ಮುಂದಿನ ಚುನಾವಣೆಯಲ್ಲಿ ಹಿರಿಯ ಪುತ್ರ ಮಲ್ಲಿಕಾರ್ಜುನ್‍ಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. ಆದರೆ ಲೋಕಾಯುಕ್ತ ಬಯಲು ಮಾಡಿದ ಲಂಚಕಾಂಡ ವಿರೂಪಾಕ್ಷಪ್ಪ ಕುಟುಂಬದ ರಾಜಕೀಯ ಜೀವನಕ್ಕೆ ಹೆಚ್ಚು ಕಡಿಮೆ ಕೊನೆಯ ಮೊಳೆ ಹೊಡೆದಿದೆ.

ಈ ಮಧ್ಯೆ ಉಡುಪಿಯಲ್ಲಿ ಮಾತಾಡಿದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ, ಆರೋಪಿ ಮಾಡಾಳ್ ವಿರೂಪಾಕ್ಷಪ್ಪನನ್ನು ತಲೆಮರೆಸಿಕೊಳ್ಳಲು ಬಿಟ್ಟಿದ್ದೇಕೆ? ಇದ್ರಲ್ಲಿ ಬೊಮ್ಮಾಯಿ ಪಾತ್ರವೇನು ಎಂದು ಪ್ರಶ್ನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *