ಲೋಕಸಭೆಯಲ್ಲೂ ಕೊರೊನಾ ವಿರುದ್ಧ ಹೋರಾಟದ ವಿಶೇಷ ವ್ಯಕ್ತಿಗಳಿಗೆ ಗೌರವ

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿರುವ ವಿಶೇಷ ವ್ಯಕ್ತಿಗಳಿಗೆ ಲೋಕಸಭೆಯಲ್ಲಿ ಇಂದು ಗೌರವ ಸಲ್ಲಿಸಲಾಯಿತು. ಸ್ಪೀಕರ್ ಓಂ ಬಿರ್ಲಾ ಮನವಿ ಹಿನ್ನೆಲೆ ಲೋಕಸಭೆಯ ಎಲ್ಲ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದರು.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹಣಕಾಸು ಮಸೂದೆ ಅಂಗೀಕಾರ ಬಳಿಕ ಅನಿರ್ದಿಷ್ಟಾವಧಿಗೆ ಸಂಸತ್ ಕಲಾಪಗಳು ಮುಂದೂಡಲು ನಿರ್ಧರಿಸಲಾಗಿತ್ತು. ಇದಕ್ಕೂ ಮುನ್ನ ಇಂದು ಲೋಕಸಭೆಯ ವಿಶೇಷ ಗೌರವ ಸಲ್ಲಿಸಲಾಯಿತು.

ಲೋಕಸಭೆ ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷ ಓಂ ಬಿರ್ಲಾ, ನಿನ್ನೆ ಜಾತಿ ಮತ ಪಂಥ ಭೇಧ ಭಾವಗಳನ್ನು ಮರೆತು ಕೊರೊನಾ ವೈರಸ್ ವಿರುದ್ಧ ಭಾರತ ಒಂದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಸಂಜೆ ಐದು ಗಂಟೆಗೆ ಜನರು ಚಪ್ಪಾಳೆ ಹೊಡೆಯುವ ಮೂಲಕ ವಿಶೇಷ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ತುರ್ತು ಸಂದರ್ಭದಲ್ಲಿ ಪೊಲೀಸ್, ಡಾಕ್ಟರ್, ಸಫಾಯಿ ಕರ್ಮಚಾರಿಗಳು, ಮಾಧ್ಯಮ ಪ್ರತಿನಿಧಿಗಳನ್ನು ನಾವು ವಿಶೇಷವಾಗಿ ಗೌರವಿಸಬೇಕಿದೆ. ನಿನ್ನೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದಾರೆ. ಹೀಗಾಗಿ ನಾವು ಕೂಡಾ ಎದ್ದು ನಿಂತು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಬೇಕು ಎಂದರು. ಸಭಾಧ್ಯಕ್ಷರ ಸೂಚನೆ ಹಿನ್ನೆಲೆ ಕಲಾಪದಲ್ಲಿದ್ದ ಎಲ್ಲ ಸಂಸದರು ಎದ್ದು ನಿಂತು ಕೃತ್ಯಜ್ಞತೆ ಸಲ್ಲಿಸಿದರು.

 

Comments

Leave a Reply

Your email address will not be published. Required fields are marked *