ತೃತೀಯ ರಂಗ ಸಾಧ್ಯವಿಲ್ಲ, ಯುಪಿಎ ಬೆಂಬಲಿಸಿ: ಕೆಸಿಆರ್‌ಗೆ ಸ್ಟಾಲಿನ್ ಸಲಹೆ

ಚೆನ್ನೈ: ತೃತೀಯ ರಂಗ ರಚನೆ ಸಾಧ್ಯವಿಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡಿ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾಗಿ ತೃತೀಯ ರಂಗ ರಚನೆ ಕುರಿತಾಗಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರವಷ್ಟೇ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಆದರೆ ಸ್ಟಾಲಿನ್ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ.ಕೆ.ಸ್ಟಾಲಿನ್ ಅವರು, ತೃತೀಯ ರಂಗ ರಚನೆಯ ವಿಚಾರವಾಗಿ ಕೆ.ಚಂದ್ರಶೇಖರ್ ಯಾವುದೇ ಚರ್ಚೆ ಮಾಡಿಲ್ಲ. ತಮಿಳುನಾಡಿನ ದೇವಸ್ಥಾನ, ಪವಿತ್ರ ಕ್ಷೇತ್ರಗಳಿಗೆ ಆಗಮಿಸಿದ್ದ ಹಿನ್ನೆಯಲ್ಲಿ ನನ್ನನ್ನು ಭೇಟಿ ಮಾಡಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕೆ.ಚಂದ್ರಶೇಖರ್ ರಾವ್ ಹಾಗೂ ಸ್ಟಾಲಿನ್ ಅವರು ಸೋಮವಾರ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದರು. ಈ ವೇಳೆ ತೃತೀಯ ರಂಗ ಕಾರ್ಯಸೂಚಿಯ ಬಗ್ಗೆ ಕೆಸಿ ರಾವ್ ಅವರು ತಿಳಿಸಿದ್ದಾರೆ. ಆದರೆ ಇದಕ್ಕೆ ಎಂ.ಕೆ.ಸ್ಟಾಲಿನ್ ಅವರು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಿಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾವು ಕಾಂಗ್ರೆಸ್ ಮೈತ್ರಿಕೂಟದಿಂದ ಹೊರಬರುವುದಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಪ್ರಸ್ತಾಪಿಸಿದ್ದೇನೆ. ಈ ವಿಚಾರಕ್ಕೆ ಡಿಎಂಕೆ ಬದ್ಧವಾಗಿದೆ. ನಮ್ಮ ನಿಲುವು ಬಿಜೆಪಿ ವಿರುದ್ಧವಾಗಿದೆ. ಹೀಗಾಗಿ ನೀವು ಕೂಡ ಯುಪಿಎ ಬೆಂಬಲಿಸಿ ಎಂದು ಸ್ಟಾಲಿನ್, ಕೆಸಿ ರಾವ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಚಂದ್ರಶೇಖರ್ ರಾವ್ ಅವರು, ಕಾಂಗ್ರೆಸ್ ಜೊತೆಗೆ ಮಹಾಮೈತ್ರಿಯ ಜೊತೆಗೆ ಚುನಾವಣೆ ಎದುರಿಸಿದ್ದರೂ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಲು ಒಂದಾಗಬಹುದು. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಬಹುಮತ ಸಾಧಿಸುವುದಿಲ್ಲ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *