ಹೆಗ್ಡೆಗೆ ಹೊಟ್ಟೆ ತುಂಬಿಸಿಕೊಳ್ಳಲು ಇಸ್ಲಾಂ ದೇಶ ಬೇಕು, ಮುಸ್ಲಿಮರ ಮತ ಬೇಡ: ಅಸ್ನೋಟಿಕರ್

ಕಾರವಾರ: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಇಸ್ಲಾಂ ದೇಶ ಬೇಕು. ಆದರೆ ಮುಸ್ಲಿಮರ ಮತ ಬೇಡ ಅಂತ ಹೇಳುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ನಗರದ ಬೈತ್ಕೋಲ ಬಡಾವಣೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅನಂತ್‍ಕುಮಾರ್ ಹೆಗ್ಡೆ ಅವರು ಇರಾನ್ ದೇಶಗಳಲ್ಲಿ ಬಿಟುಮಿನ್ (ಟಾರ್) ತಂದು ತಮ್ಮ ಕದಂಬ ಸಂಸ್ಥೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಅವರ ವ್ಯವಹಾರಕ್ಕೆ ಇಸ್ಲಾಂ ದೇಶ ಬೇಕು. ಆದರೆ ರಾಜಕೀಯ ಬಂದಾಗ ಮಾತ್ರ ಮುಸ್ಲಿಂ ಮತ ಬೇಡ ಎನ್ನುತ್ತಾರೆ. 30 ಪ್ರಕರಣಗಳನ್ನು ಎದರಿಸುತ್ತಿರುವ ಫಯಾಜ್ ಎಂಬ ಯುವಕನ ಜೊತೆಗೆ ಕೇಂದ್ರ ಸಚಿವರು ಇಂದು ಸಮಾವೇಶ ನಡೆಸಿದರು. ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತೀರ್ಥ ನೀಡಿದರು. ಇದು ಸ್ವಾರ್ಥಕ್ಕಾಗಿ ಮಾಡಿದ ತಂತ್ರ ಎಂದು ದೂರಿದರು.

ಅನಂತ್‍ಕುಮಾರ್ ಹೆಗ್ಡೆ ಅವರು 5 ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೊದಿ ಅವರ ಅಲೆಯಲ್ಲಿ ಅವರು ಗೆಲುವು ಸಾಧಿಸಿದರು. ಕೌಶಲಾಭಿವೃದ್ಧಿ ಸಚಿವರಾಗಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ ಎಂದು ದೂರಿದರು.

ಕಿತ್ತೂರಿನಲ್ಲಿ ಜನರು ಅನಂತ್‍ಕುಮಾರ್ ಹೆಗ್ಡೆ ಅವರ ಫೋಟೋಗೆ ಕಲ್ಲಿನಿಂದ ಹೊಡೆದಿದ್ದಾರೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ. ನನಗೆ ಬೆಂಬಲ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *