ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ

ಮುಂಬೈ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮೋದಿ(PM Narendra Modi) ನೇತೃತ್ವದ ಎನ್‌ಡಿಎ ಒಕ್ಕೂಟ 350ಕ್ಕೂ ಹೆಚ್ಚು ಸ್ಥಾನ ಗೆದ್ದು ಮೂರನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ದಿನ ಬಾಂಬೆ ಷೇರು ಮಾರುಕಟ್ಟೆ (BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

 

ಸೆನ್ಸೆಕ್ಸ್‌ ಇಂದು ಒಂದೇ ದಿನ ಬರೋಬ್ಬರಿ 2,507.47 ಅಂಶ ಏರಿಕೆಯಾಗಿ ಅಂತಿಮವಾಗಿ 76,468.78 ರಲ್ಲಿ ಕೊನೆಯಾಯಿತು. ನಿಫ್ಟಿ 733 ಅಂಶ ಏರಿಕೆಯಾಗಿ 23,263.90 ರಲ್ಲಿ ಇಂದಿನ ವಹಿವಾಟನ್ನು ಮುಗಿಸಿತು. ಈ ಹಿಂದೆ ಸೆನ್ಸೆಕ್ಸ್‌ ಮತ್ತು ನಿಫ್ಟಿ 2021 ಜನವರಿಯಲ್ಲಿ 5% ಏರಿಕೆಯಾಗಿತ್ತು. ಮೂರು ವರ್ಷದ ಬಳಿಕ ಸೆನ್ಸೆಕ್ಸ್‌ ಮತ್ತು ನಿಫ್ಟಿ 50 ಭರ್ಜರಿ ಏರಿಕೆ ಕಂಡಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ 

ಸರ್ಕಾರಿ ಸ್ವಾಮ್ಯದ ಕಂಪನಿಗಳು, ಬ್ಯಾಂಕ್‌ಗಳು, ಅದಾನಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳ ಷೇರು ಬೆಲೆಗಳು ಏರಿಕೆ ಕಂಡಿವೆ. ಗೇಲ್‌ ಪ್ರತಿ ಷೇರಿನ ಬೆಲೆ 26.50 ರೂ. (12.97%), ಪವರ್‌ ಫೈನಾನ್ಸ್‌ 62.35 ರೂ. (12.66%), ಆರ್‌ಇಸಿ 66.75 ರೂ.(12.41%), ಬ್ಯಾಂಕ್‌ ಆಫ್‌ ಬರೋಡಾ 32.05 ರೂ. (12.10%), ಅದಾನಿ ಪೋರ್ಟ್ಸ್‌ ರೂ. 146.55(10.20%) ಏರಿಕೆ ಕಂಡಿದೆ.

ಏರಿಕೆಗೆ ಕಾರಣ ಏನು?
ಸತತ ಮೂರನೇ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿದೆ. ಈ ಹಿಂದೆಯೂ ವಿಧಾನಸಭಾ ಚುನಾವಣೆಗಳ ಫಲಿತಾಂಶದ ದಿನ ಬಿಜೆಪಿ ಜಯಗಳಿಸಿದ ಸಮಯದಲ್ಲೂ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆ ಕಂಡಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿರಲಿಲ್ಲ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ

ಭಾರತದ ಆರ್ಥಿಕತೆ (Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದ್ದು ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ 7.8% ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸಿದ್ದು, 2023-24ರ ಹಣಕಾಸು ವರ್ಷದಲ್ಲಿ 8.2% ಪ್ರಗತಿ ಸಾಧಿಸಿತ್ತು. ಮೇ 31 ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಈ ವರದಿಯನ್ನು ಬಿಡುಗಡೆ ಮಾಡಿತ್ತು. ವಿವಿಧ ಆರ್ಥಿಕ ತಜ್ಞರು, ವಿದೇಶದಲ್ಲಿರುವ ರೇಟಿಂಗ್‌ ಸಂಸ್ಥೆಗಳು 2023-24ರಲ್ಲಿ ಜಿಡಿಪಿ ದರ 7.5% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದ್ದವು. ಐಎಂಎಫ್ 6.8% ರಷ್ಟು ಮಾತ್ರ ಜಿಡಿಪಿ ದಾಖಲಿಸಬಹುದು ಎಂದು ಅಂದಾಸಿಜಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾವಾಗಿದ್ದು ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿಯಾಗುತ್ತಿರುವುದನ್ನು ಕಂಡು ಹರ್ಷಗೊಂಡು ಹೂಡಿಕೆದಾರರು ದೇಶದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 10% ಏರಿಕೆಯಾಗಿತ್ತು. ಈ ಎಲ್ಲಾ ಕಾರಣದಿಂದ ದೇಶದಲ್ಲಿರುವ ಹೂಡಿಕೆದಾರರು ಮತ್ತು ವಿದೇಶದ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.