ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್‌ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?

ಲಕ್ನೋ: ಮಂಗಳವಾರ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ (PM Narendra Modi) ಇಂದೇ ಸ್ವಕ್ಷೇತ್ರ ವಾರಣಾಸಿಗೆ (Varanasi) ತೆರಳಿದ್ದು, ಭರ್ಜರಿ ರೋಡ್‌ಶೋ (Road Show) ನಡೆಸಿದ್ದಾರೆ. ಮಾಳವೀಯ ವೃತ್ತದಿಂದ ಆರಂಭವಾದ ರೋಡ್ ಶೋ ಕಾಶಿ ವಿಶ್ವನಾಥ ಧಾಮದವರೆಗೂ 6 ಕಿಲೋಮೀಟರ್ ಉದ್ದ ನಡೆಯಿತು.

ಸಂತ ರವಿದಾಸ್ ಗೇಟ್, ಅಸ್ಸಿ ಘಾಟ್, ಶಿವಲೀಲಾ ಘಾಟ್, ಸೋನಾರ್‌ಪುರ, ಜಂಗಮವಾಡಿ, ಗೋದೌಲಿಯಾವನ್ನು ಮೋದಿ ರೋಡ್ ಶೋ ಹಾದು ಹೋಯ್ತು. 1200 ವರ್ಷಗಳ ಹಿಂದೆ ಶಂಕರಾಚಾರ್ಯರು (Shankaracharya) ಇದೇ ರಸ್ತೆಯಲ್ಲಿ ಓಡಾಡಿದ್ದರು ಎಂಬ ಪ್ರತೀತಿ ಇದೆ. ಮೋದಿ ಸಾಗಿದ ರಸ್ತೆಯಲ್ಲಿ 25 ದೇವಸ್ಥಾನಗಳು, 60ಕ್ಕೂ ಹೆಚ್ಚು ಆಶ್ರಮಗಳಿದ್ದು, ದಾರಿಯುದ್ದಕ್ಕೂ ಸಾವಿರಾರು ಮಂದಿ ಮೋದಿಗೆ ಹೂಮಳೆಯ ಸ್ವಾಗತ ನೀಡಿದರು.  ಇದನ್ನೂ ಓದಿ: ಹೇಮಂತ್‌ ಸೊರೆನ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ

ಬಿಸ್ಮಿಲ್ಲಾ ಖಾನ್ ಕುಟುಂಬದ ಶಹನಾಯಿ ವಾದನವೂ ಇತ್ತು. ಕಲಾ ತಂಡಗಳ ವೈಭವವೂ ಕಂಡುಂತು. 5000ಕ್ಕೂ ಹೆಚ್ಚು ಮಹಿಳೆಯರು, ಗುಜರಾತಿಗಳು, ಮರಾಠಿಗಳು, ಬೆಂಗಾಲಿಗಳು, ತಮಿಳರು, ಪಂಜಾಬಿಗಳು. ಹೀಗೆ ದೇಶದ ಎಲ್ಲಾ ಭಾಗದ ಮಂದಿ ಮೋದಿ ರೋಡ್‌ಶೋನಲ್ಲಿ ಪಾಲ್ಗೊಂಡಿದರು.

ಜನರ ಪ್ರತಿಕ್ರಿಯೆ ನೋಡಿ ಪ್ರಧಾನಿ ಮೋದಿ ಫುಲ್ ಖುಷಿಯಾದರು. ಜನರತ್ತ ಕೈಬೀಸಿ, ಕಮಲದ ಚಿನ್ಹೆಯನ್ನು ತೋರಿಸಿದರು. ರೋಡ್‌ಶೋನಲ್ಲಿ ಮೋದಿ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಪಾಲ್ಗೊಂಡಿದ್ದರು. ರೋಡ್‌ ಶೋ ಅಂತ್ಯವಾದ ಬಳಿಕ ಕಾಶಿ ವಿಶ್ವೇಶ್ವರನಿಗೆ ಮೋದಿ ಪೂಜೆ ಸಲ್ಲಿಸಿದರು. 10 ವರ್ಷದಲ್ಲಿ ವಾರಣಾಸಿ ಹೇಗೆ ಬದಲಾಗಿದೆ ಎಂಬುದನ್ನು ಲೇಸರ್ ಶೋ ಮೂಲಕ ಪ್ರಸ್ತುತ ಪಡಿಸಲಾಯಿತು. ಇದನ್ನೂ ಓದಿ: ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

ಮಂಗಳವಾರ ಯಾಕೆ?
ನಾಳೆ ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನ. ಈ ದಿನ ಬ್ರಹ್ಮನ ಕಮಂಡಲದಿಂದ ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಇವರೇ ನೀಡಿದ್ದರು.