2 ದಿನದಲ್ಲಿ ಯದುವೀರ್‌ ಪರ ಪ್ರಚಾರಕ್ಕೆ ತೊಡಗುತ್ತೇನೆ: ಪ್ರತಾಪ್‌ ಸಿಂಹ

ಮೈಸೂರು: ಯದುವೀರ್‌ ಒಡೆಯರ್‌ (Yaduveer Wadiyar) ಅವರಿಗೆ ಅಭಿನಂದನೆ ತಿಳಿಸಿ ಕೂಡಲೇ ಚುನಾವಣೆಗೆ ತಯಾರಿ ಆರಂಭಿಸೋಣ ಎಂದು ಮೈಸೂರಿನ ಹಾಲಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್‌ ಪ್ರಕಟಿಸಿದ ಪ್ರತಾಪ್‌ ಸಿಂಹ, ಅಭಿನಂದನೆಗಳು ಮಹಾರಾಜ ಶ್ರೀ ಯದುವೀರ್‌. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ ದೇಶಕ್ಕಾಗಿ ಮೋದಿಗಾಗಿ ಎಂದು ಬರೆದಿದ್ದಾರೆ.

ಮಹಾರಾಜ ಯದುವೀರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದೆ. ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಎಲ್ಲರಿಗೂ ಧನ್ಯವಾದಗಳು. ನಾನು ಜನಸಂಘದ ದೀಪದ ಗುರುತಿನಲ್ಲಿ ಗೆದ್ದು ಪಂಚಾಯಿತಿ ಛೇರ್ಮನ್ ಆದ ವ್ಯಕ್ತಿಯ ಮಗ, ನಾನು ಸಾಯುವವರೆಗೂ ಮೋದಿ (PM Narendra Modi) ಭಕ್ತ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನಿಂದ ಯದುವೀರ್‌, ಬೆಂಗಳೂರು ಉತ್ತರದಿಂದ ಕರಂದ್ಲಾಜೆ – ಯಾರಿಗೆ ಎಲ್ಲಿ ಟಿಕೆಟ್‌?

ಮಾರ್ಚ್‌ 9 ರ ಬೆಳಗ್ಗೆ ಪಬ್ಲಿಕ್‌ ಟಿವಿ ಈ ಬಾರಿ ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಗೋದು ಅನುಮಾನ. ಮೈಸೂರಿನಿಂದ ಯದುವೀರ್‌ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಮಾಡಿತ್ತು. ಈ ವರದಿ ರಾಷ್ಟ್ರ ಮಟ್ಟದಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್‌ ಸಿಂಹ ಪರ ಟಿಕೆಟ್‌ ನೀಡುವಂತೆ ಅಭಿಯಾನ ಸಹ ನಡೆದಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್‌ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್‌ ನೀಡಿದೆ.