ದೇಶವಾಸಿಗಳೇ ಎಚ್ಚರ, ಕಾಂಗ್ರೆಸ್‌ ನಿಮ್ಮ ಆಸ್ತಿ, ಚಿನ್ನದ ಮೇಲೆ ಕಣ್ಣಿಟ್ಟಿದೆ: ಮೋದಿ

– ನನ್ನ ಪ್ರಯತ್ನದಿಂದಾಗಿ ಹಜ್‌ ಕೋಟಾ ಹೆಚ್ಚಳವಾಗಿದೆ
– ಮಾವೋವಾದಿ ಚಿಂತನೆಯನ್ನು ಜಾರಿಗೆ ತರಲು ಕಾಂಗ್ರೆಸ್‌ ಮುಂದಾಗಿದೆ

ಲಕ್ನೋ: ಕಾಂಗ್ರೆಸ್ ಮತ್ತು INDIA ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಉಲ್ಲೇಖಿಸಿ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ದೇಶವಾಸಿಗಳನ್ನು ಎಚ್ಚರಿಸಲು ಬಯಸುತ್ತೇನೆ. ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ. INDIA ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ  ಹೇಳಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾಷಣವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ರಾಜಕುಮಾರ ಅವರು ಸರ್ಕಾರ ರಚಿಸಿದರೆ, ಯಾರು ಎಷ್ಟು ಸಂಪಾದಿಸುತ್ತಾರೆ, ಎಷ್ಟು ಆಸ್ತಿ ಹೊಂದಿದ್ದಾರೆ ಮತ್ತು ಎಷ್ಟು ಮನೆ ಹೊಂದಿದ್ದಾರೆ ಎಂದು ಸಮೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅವರು ಸರ್ಕಾರವು ನಿಮ್ಮ ಆಸ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.  ಇದು ಮಾವೋವಾದಿ ಚಿಂತನೆ. ಇದು ಕಮ್ಯುನಿಸ್ಟರ ಚಿಂತನೆಯಾಗಿದ್ದು ಇದೇ ನೀತಿಯನ್ನು ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟವು ಭಾರತದಲ್ಲಿ ಜಾರಿಗೆ ತರಲು ಬಯಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಈ ದೇಶ ಉಳಿಸುವ ವ್ಯಕ್ತಿ ಮೋದಿ ಒಬ್ಬರೇ – ಪ್ರಧಾನಿಗಳ ಗುಣಗಾನ ಮಾಡಿದ ದೊಡ್ಡಗೌಡರು

ಹಜ್‌ ಕೋಟಾ ಹೆಚ್ಚಳ: ಹಿಂದೆ ಹಜ್ ಕೋಟಾ (Haj Quota) ಕಡಿಮೆ ಇದ್ದ ಕಾರಣ ಅಲ್ಲಿ ಸಾಕಷ್ಟು ಜಗಳ ನಡೆಯುತ್ತಿತ್ತು. ಲಂಚ (Corruption) ಜಾಸ್ತಿ ಇದ್ದ ಕಾರಣ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗುವ ಅವಕಾಶ ಸಿಗುತ್ತಿತ್ತು. ಭಾರತದಲ್ಲಿನ ನಮ್ಮ ಮುಸ್ಲಿಂ (Musilm) ಸಹೋದರ ಸಹೋದರಿಯರಿಗೆ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್‌ಗೆ ವಿನಂತಿಸಿದ್ದೆ. ಇದನ್ನೂ ಓದಿ: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ – ಕೊನೆಗೂ ಸಮಿತಿ ರಚಿಸಿದ ಸರ್ಕಾರ

ಇಂದು ಭಾರತದ ಹಜ್ ಕೋಟಾವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ವೀಸಾ ನಿಯಮಗಳನ್ನು (Visa Rules) ಸಹ ಸುಲಭಗೊಳಿಸಲಾಗಿದೆ. ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಹಜ್‌ಗೆ ಒಬ್ಬರೇ ಹೋಗುತ್ತಿರಲಿಲ್ಲ. ಮೆಹ್ರಮ್ ಇಲ್ಲದೆ ಮಹಿಳೆಯರಿಗೆ ಹಜ್‌ಗೆ ಹೋಗಲು ಸರ್ಕಾರವು ಅವಕಾಶ ಮಾಡಿಕೊಟ್ಟಿದೆ.  ಹಜ್‌ಗೆ ಹೋಗುವ ಕನಸು ನನಸಾಗುವ ಸಾವಿರಾರು ಸಹೋದರಿಯರಿಂದ ನಾನು ಆಶೀರ್ವದಿಸುತ್ತಿದ್ದೇನೆ ಎಂದು ತಿಳಿಸಿದರು.