ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು, ಪಕ್ಷಕ್ಕೆ ದ್ರೋಹ ಮಾಡಲ್ಲ: ಮುದ್ದಹನುಮೇಗೌಡ

ತುಮಕೂರು: ನಾನು ದುರಂತ ನಾಯಕನಾಗಿ ಇರುತ್ತೇನೆಯೇ ಹೊರತು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಸಂಸದ ಮುದ್ದಹನುಮೇಗೌಡ ಹೇಳಿದ್ದಾರೆ.

ತುಮಕೂರಿನ ಮದ್ದೂರಿನಲ್ಲಿ ಮಾತನಾಡಿದ ಸಂಸದರು, ನನ್ನ ರಾಜಕೀಯದ ಜೀವನದಲ್ಲಿ ಹಲವು ಬಾರಿ ಎ ಫಾರಂ ಹಾಗೂ ಬಿ ಫಾರಂ ಬಗ್ಗೆ ಅರಿತಿದ್ದೇನೆ. ನನಗೆ ಬಿ ಫಾರಂ ಸಿಗದಿದ್ದಾಗ ಕೆಲ ವಿಕೃತ ಮನಸ್ಸುಗಳು ಸಂಭ್ರಮಿಸಿರಬಹುದು ಎಂದ ಅವರು, ಕಾಂಗ್ರೆಸ್-ಜೆಡಿಎಸ್‍ನವರು ಒಟ್ಟಾಗಿ ಚುನಾವಣೆಯಲ್ಲಿ ಶ್ರಮಿಸಬೇಕಿದೆ. ಪ್ರಾಮಾಣಿಕವಾಗಿ ಪ್ರಯತ್ನ ಮೂಲಕ ನಾವು ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರನ್ನು ಗೆಲ್ಲಿಸೋಣ ಎಂದು ಮನವಿ ಮಾಡಿಕೊಂಡರು.

ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಐದು ವರ್ಷಗಳ ಕಾಲ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಹಗಲಿರುಳು ಜನರ ಜೊತೆಗಿದ್ದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹಾಗಿದ್ದರೂ ನಾನು ಪುನಃ ಸ್ಪರ್ಧೆ ಮಾಡುವ ಅವಕಾಶ ಒದಗಿ ಬರಲಿಲ್ಲ ಎನ್ನುವ ವಿಚಾರ ನಿಮಗೆ ಗೊತ್ತಿದೆ. ಅದನ್ನು ಪುನರಾವರ್ತನೆ ಮಾಡುವುದಿಲ್ಲ. ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‍ಗೆ ಮನವಿ ಮಾಡಿಕೊಂಡೆ. ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಈ ಸೀಟು ಬಿಟ್ಟುಕೊಡುವಂತೆ ಅವರು ಹೇಳಿದರು. ಹೀಗಾಗಿ ಬಿಟ್ಟುಕೊಟ್ಟಿದ್ದೇನೆ ಎಂದರು.

ದಂಡಿನ ಮಾರಮ್ಮನ ಸನ್ನಿಧಿಯಲ್ಲಿ ಹೇಳುತ್ತೇನೆ, ನಾನು ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿಯಲು ನನ್ನ ಕೈಯನ್ನು ಶುದ್ಧವಾಗಿ ಇರಿಸಿಕೊಂಡಿದ್ದೇನೆ. ಯಾರಿಂದಲೂ ಹಣ ಪಡೆದಿಲ್ಲ. ಮಾಧ್ಯಮದಲ್ಲಿ ಬಂದ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದರು.

Comments

Leave a Reply

Your email address will not be published. Required fields are marked *