– ಸಿದ್ದರಾಮಯ್ಯ, ದೇವೇಗೌಡ ಧೃತರಾಷ್ಟ್ರರಿದ್ದಂತೆ
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎರಡಂಕಿ ದಾಟದಂತೆ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್, 8 ಕ್ಷೇತ್ರಗಳಿಂದ ಜೆಡಿಎಸ್ ಸ್ಪರ್ಧೆ ಮಾಡುತ್ತಿವೆ. ಆದರೆ ಎರಡು ಪಕ್ಷಗಳ ಕಾರ್ಯಕರ್ತರೇ ಮೈತ್ರಿ ಅಭ್ಯರ್ಥಿಯನ್ನು ಸೋಲಿಸುತ್ತಾರೆ. ಕಾಂಗ್ರೆಸ್‍ನಲ್ಲಿರುವ ಭಿನ್ನಮತ ಕೂಡ ಕೈ ಅಭ್ಯರ್ಥಿಗಳ ಸೋಲಿಗೆ ಪ್ರಮುಖ ಕಾರಣವಾಗಲಿದೆ ಎಂದರು. ಇದನ್ನು ಓದಿ: ರಾಜ್ಯದಲ್ಲಿ ಎರಡು ಅಂಕಿ ದಾಟಲು ಬಿಜೆಪಿಯನ್ನ ಬಿಡಲ್ಲ: ಎಚ್‍ಡಿಡಿ ಶಪಥ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಇಬ್ಬರೂ ಧೃತರಾಷ್ಟ್ರರಿದ್ದಂತೆ. ಈಗ ಇಬ್ಬರೂ ಒಬ್ಬರನೊಬ್ಬರು ಅಪ್ಪಿಕೊಂಡಿದ್ದಾರೆ. ಯಾರ ಕಥೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಉಮೇಶ್ ಜಾದವ್ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಏಕೆ ತಡ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಬುದ್ಧಿವಾದ ಹೇಳುವ ವ್ಯಕ್ತಿ. ಅವರು ಕಾನೂನು ತಿಳಿದವರು. ಆದರೂ ರಾಜೀನಾಮೆ ಅಂಗೀಕರಿಸಲು ತಡ ಏಕೆ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿಯ ಬಹುಪಾಲು ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

Leave a Reply