ಮೋದಿ ಸಂಸತ್ ಹೊರಗೆ ಹುಲಿ, ಒಳಗೆ ಇಲಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾರ್ಲಿಮೆಂಟ್ ಹೊರಗೆ ಹುಲಿಯಂತಿದ್ದರೆ, ಒಳಗೆ ಇಲಿಯಂತೆ ಇರುತ್ತಾರೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜನರ ಮುಂದೆ ಒಂದು ಗಂಟೆ ಹೇಳಿದ್ದನ್ನೇ ಪುನಃ ಹೇಳುತ್ತಾರೆ. ಆದರೆ ಅವರು ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದು ಕೇವಲ 25 ಗಂಟೆ 25 ನಿಮಿಷ ಮಾತ್ರ. ಕಲಾಪದ ವೇಳೆ ವಿಪಕ್ಷ ನಾಯಕರ ಮುಂದೆ ನಿಂತು, ಇದು ಸರಿಯಾಗಿಲ್ಲ ಅಂತ ಧೈರ್ಯದಿಂದ ಒಂದು ದಿನವೂ ಹೇಳಲಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗರು ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರು ಕಾಲಿಲ್ಲದವರು ಪೈಲ್ವಾನ್ ಆಗಲು ಸಾಧ್ಯವಿಲ್ಲ. ಎಲ್ಲರಿಗೂ ಬೈಯುವುದು ಮಾತ್ರ ಪ್ರಧಾನಿ ಮೋದಿ ಅವರಿಗೆ ಗೊತ್ತಿದೆ. ಬಿಜೆಪಿಗಾಗಿ ದುಡಿದವರನ್ನು ಕಡೆಗಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿಯ ಹಿರಿಯ ಮುಖಂಡರಾದ ಎಚ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಸುಮೀತ್ರಾ ಮಹಾಜನ್ ಸೇರಿದಂತೆ ಅನೇಕರಿಗೆ ಗೇಟ್ ಪಾಸ್ ನೀಡಿದ್ದಾರೆ. ನನ್ನನ್ನ ಬಿಟ್ಟರೆ ಯಾರೂ ಪ್ರಧಾನಿಯಾಗಲು ಯೋಗ್ಯರಿಲ್ಲ ಅಂತ ಮೋದಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ನಾನು ರೀಲ್ ಬಿಟ್ಟಿಲ್ಲ. ರೈಲ್ವೇ ಬಿಟ್ಟಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೇ ಸಚಿವನಾಗಿದ್ದಾಗ ಹರಿಹರದಿಂದ ಕೊಟ್ಟೂರು, ವಾಡಿ – ಗದಗ ರೈಲ್ವೇಗೆ ಚಾಲನೆ ನೀಡಿದ್ದೆ. ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಇಷ್ಟೆಲ್ಲ ಮಾಡಿದರೂ ಏನು ಮಾಡಿದ್ದಾರೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಏನ್ ಮಾಡಲಪ್ಪಾ? ನಿನ್ನ ಮುಖ ತೊಳಿಯಲಾ? ಸಂಬಳ ಕಳಿಯಲಾ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧ ಖರ್ಗೆ ಕಿಡಿಕಾರಿದರು.

Comments

Leave a Reply

Your email address will not be published. Required fields are marked *