ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‍ಸಿ ಮೈತ್ರಿ

– ಶ್ರೀನಗರದಿಂದ ಎನ್‍ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಪರ್ಧೆ
– ಕಾಂಗ್ರೆಸ್ ಜೊತೆಗೆ ಮೈತ್ರಿಯಿಲ್ಲ: ಮೆಹಬೂಬಾ ಮುಫ್ತಿ

ಶ್ರೀನಗರ: ಲೋಕಸಭಾ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಮೈತ್ರಿ ಮಾಡಿಕೊಂಡಿವೆ. ಈ ಮೂಲಕ ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಟ್ಟಿಹಾಕಲು ಕಾಂಗ್ರೆಸ್-ಎನ್‍ಸಿ ಭರ್ಜರಿ ರಣತಂತ್ರ ರೂಪಿಸಿವೆ.

ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜದ್ ಮತ್ತು ನ್ಯಾಷನಲ್ ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ ಜಂಟಿಯಾಗಿ ಮೈತ್ರಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಶ್ರೀನಗರದಿಂದ ಮೈತ್ರಿ ಅಭ್ಯರ್ಥಿಯಾಗಿ ಎನ್‍ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಪರ್ಧೆ ಮಾಡಲಿದ್ದಾರೆ. ಇದರಿಂದಾಗಿ ಜಮ್ಮು ಮತ್ತು ಉದಮ್‍ಪುರ ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಆದರೆ ಉಳಿದ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಎನ್‍ಸಿ ಫ್ರೆಂಡ್ಲಿ ಫೈಟ್ ನೀಡಲು ನಿರ್ಧರಿಸಿವೆ ಎನ್ನಲಾಗಿದೆ.

ಇತ್ತ ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಅವರು, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ಹೀಗಾಗಿ ಜಮ್ಮು-ಕಾಶ್ಮೀರ ಆರು ಲೋಕಸಭಾ ಕ್ಷೇತ್ರಗಳಿಂದ ಪಿಡಿಪಿ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ಆರು ಕ್ಷೇತ್ರಗಳ ಪೈಕಿ ಪಿಡಿಪಿ 3 ಸ್ಥಾನ ಹಾಗೂ ಬಿಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಮತ್ತು ಎನ್‍ಸಿ ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿತ್ತು. ಹೀಗಾಗಿ ಈ ಬಾರಿ ಮತ್ತೆ ಜಮ್ಮು-ಕಾಶ್ಮೀರದಲ್ಲಿ ಗೆಲ್ಲಲು ಕಾಂಗ್ರೆಸ್-ಎನ್‍ಸಿ ಮೈತ್ರಿ ಮಾಡಿಕೊಂಡಿವೆ.

Comments

Leave a Reply

Your email address will not be published. Required fields are marked *