ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

– ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಸಹಾಯ

ಯಾದಗಿರಿ: ಕೊರೊನಾದಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಬೆಳೆದ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ರೈತರಿಗೂ ಸಂಕಷ್ಟ ಎದುರಗಿದ್ದು, ಪಬ್ಲಿಕ್ ಟಿವಿ ಮನವಿ ಮೇರೆಗೆ ಜಿಲ್ಲೆಯ ಖಾಸಗಿ ವೈದ್ಯ ಮತ್ತು ಗುತ್ತಿಗೆದಾರ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸಂಕಷ್ಟದಲ್ಲಿರುವ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ನೆರವಾಗಲು ರಾಜ್ಯದಲ್ಲಿಯೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಗೆ ಸಿಲುಕಿ, ಸಾರಿಗೆ ಮತ್ತು ಸರಿಯಾದ ಮಾರುಕಟ್ಟೆ ಇಲ್ಲದೆ ಬೆಳೆದ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ, ವೈದ್ಯ ವಿರೇಶ್ ಜಾಕಾ ಮತ್ತು ಗುತ್ತಿಗೆದಾರ ಬಸವರಾಜ್ ಸಹಾಯ ಹಸ್ತಚಾಚಿದ್ದಾರೆ. ರೈತರರಿಂದ ಹಣ್ಣುಗಳನ್ನು ಖರೀದಿಸಿ ಬಡ ಮತ್ತು ನಿರ್ಗತಿಕರಿಗೆ ಉಚಿತ ಊಟದ ಜೊತೆ ಹಣ್ಣು ವಿತರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ವ್ಯಾಪಾರ ಮತ್ತು ನಿರ್ಗತಿಕರಿಗೆ ಆರೋಗ್ಯ ಲಭ್ಯವಾಗುತ್ತಿದೆ.

ಜಿಲ್ಲೆಯ ಖಾನಾಪುರ ಗ್ರಾಮದ ರೈತ ನಾಗಪ್ಪ 6 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್ ಡೌನ್ ಹಿನ್ನೆಲೆ ಬೆಳೆ ಸಾಗಿಸಲು ಸಕಾಲಕ್ಕೆ ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಇದರಿಂದ ನಾಗಪ್ಪ ಅವರ 4 ಎಕರೆ ಕಲ್ಲಂಗಡಿ ಮಣ್ಣು ಪಾಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಈಗ ಉಳಿದಿರುವ 2 ಎಕರೆ ಕಲ್ಲಂಗಡಿ ಖರೀದಿಗೆ ಮುಂದಾದ ವೈದ್ಯ ಮತ್ತು ಗುತ್ತಿಗೆದಾರ, ಸುಮಾರು 10 ಕ್ವಿಂಟಲ್ ಕಲ್ಲಂಗಡಿ ಖರೀದಿ ಮಾಡಿ ನಿರ್ಗತಿಕರಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ಇಬ್ಬರು ಕಳೆದ 15 ದಿನಗಳಿಂದ ಉಚಿತ ಊಟ ನೀಡುತ್ತಿದ್ದು, ಈಗ ಇಂತಹ ವಿನೂತನ ಪ್ರಯತ್ನದ ಮೂಲಕ ಜಿಲ್ಲೆಯ ರೈತರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ವೈದ್ಯ ಮತ್ತು ಗುತ್ತಿಗೆದಾರನ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

Comments

Leave a Reply

Your email address will not be published. Required fields are marked *