ರೈತರಿಗೆ ನೆರವಾದ ಸಂಸದ ಡಿಕೆ ಸುರೇಶ್- ನಷ್ಟವಾಗುತ್ತಿದ್ದ ಕಲ್ಲಂಗಡಿ ಖರೀದಿ

ಚಾಮರಾಜನಗರ: ಕೊರೊನಾ ಭೀತಿಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ರೈತರ ನೋವಿಗೆ ಸಂಸದ ಡಿ.ಕೆ.ಸುರೇಶ್ ಸ್ಪಂದಿಸಿದ್ದು, ಕಲ್ಲಂಗಡಿ, ಟೊಮಟೊ, ಬದನೆಕಾಯಿ ನಷ್ಟವಾಗುತ್ತಿದ್ದುದನ್ನು ಮನಗಂಡು ಸ್ವತಃ ತಾವೇ ಖರೀದಿ ಮಾಡಲು ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ. ವ್ಯಾಪ್ತಿಯ ನಲ್ಲೂರು, ಗದ್ದೆ ಪೋಡಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಈ ವೇಳೆ ಬೆಳೆ ನಷ್ಟವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸುಮಾರು 18 ಎಕರೆಯಲ್ಲಿ ಬೆಳೆದ ಕಲ್ಲಂಗಡಿಯನ್ನು ಸುರೇಶ್ ಕೊಂಡುಕೊಂಡಿದ್ದಾರೆ. ಕಲ್ಲಂಗಡಿ ಜೊತೆಗೆ ಟೊಮಟೊ, ಬದನೆಕಾಯಿ ಕೊಂಡು ಸ್ಥಳೀಯ ಜನರಿಗೆ ವಿತರಣೆ ಮಾಡುವಂತೆ ಮುಖಂಡರಿಗೆ ಸೂಚಿಸಿದ್ದಾರೆ.

ಈ ಕುರಿತು ಚಾಮರಾಜನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದು, ತರಕಾರಿ, ಹಣ್ಣು, ಹೂವು ಯಾರೂ ಕಾಪಾಡಿಕೊಳ್ಳಲು ಆಗುವುದಿಲ್ಲ. ಹೂವುಗಳು ಮೂರೇ ದಿನಕ್ಕೆ ಒಣಗಿ ಹೋಗುತ್ತವೆ. ಮಾರುಕಟ್ಟೆ ಕೂಡ ಉತ್ತೇಜನಕಾರಿಯಾಗಿಲ್ಲ. ಕೊರೊನಾ ಎಪೆಕ್ಟ್ ನೇರವಾಗಿ ರೈತರ ಮೇಲೆ ಆಗಿದೆ. ಅದರಲ್ಲೂ ತೋಟಗಾರಿಕೆ ಬೆಳೆ ಮೇಲೆ ಹೆಚ್ಚು ಬಿದ್ದಿದೆ. ಇದರಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾ ವೈರಸ್ ರೈತರನ್ನು ಸಾಯಿಸಬೇಕಾಗಿಲ್ಲ, ಸಾಲಸೂಲ ಮಾಡಿ ಹಾಕಿರುವ ಬಂಡವಾಳ ಸಾವಿನ ದವಡೆಗೆ ತಳ್ಳುತ್ತಿದೆ. ಬೆಳೆಗಳನ್ನು ಬೆಳೆಯಲು ನಿಗದಿತ ಅವಧಿ ಇರುತ್ತದೆ. ಅದಕ್ಕೆ ತಕ್ಕಂತಹ ಬಂಡವಾಳ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆಯಾಗಿದೆ, ಟ್ಯ್ರಾಕ್ಟರ್ ಮೂಲಕ ರೂಟರ್ ಹೊಡೆಸಿ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಹೀಗಾಗಿ ರೈತರಲ್ಲಿ ಚೈತನ್ಯ ತುಂಬಲು 18 ಎಕರೆಯಲ್ಲಿ ಬೆಳೆದ ಬೆಳೆಯನ್ನು ಖರೀದಿ ಮಾಡುತ್ತಿದ್ದೇನೆ. ಟೊಮಟೊ, ಬದನೆಕಾಯಿ, ಕಲ್ಲಂಗಡಿ ಖರೀದಿಗೆ ಮುಂದಾಗಿದ್ದೇನೆ. ಖರೀದಿ ಮಾಡಿದ ಹಣ್ಣು, ತರಕಾರಿಯನ್ನು ಜನರಿಗೆ ಉಚಿತವಾಗಿ ಹಂಚುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *