ಕೊರೊನಾ ಭೀತಿ ಮಧ್ಯೆ ಮಾನವೀಯತೆ ಮೆರೆದ ಪೊಲೀಸರು

– ಮೂರ್ಛೆ ರೋಗದಿಂದ ಬಿದ್ದವನ ರಕ್ಷಣೆ

ಗದಗ: ಕೊರೊನಾ ವೈರಸ್ ಹಾವಳಿಯ ಈ ಸಂದರ್ಭದಲ್ಲಿ ಜನ ಒಬ್ಬರನ್ನು ಒಬ್ಬರು ಮುಟ್ಟಲು ಹೆದರುತ್ತಾರೆ. ಇಂತಹ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ನಡುರಸ್ತೆನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಘಟನೆ ನಡೆದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ತರಲು ಬಂದ ಕಾಶಿ ವಿಶ್ವನಾಥ ನಗರದ ನಿವಾಸಿ ಶಿವಾನಂದ ಆಸಂಗಿ ಅವರು ಮೂರ್ಛೆ ರೋಗದಿಂದಾಗಿ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ನಡುರಸ್ತೆಯಲ್ಲಿ ಒದ್ದಾಡುತ್ತಿದ್ದ ಶಿವಾನಂದ ಅವರನ್ನು ನೋಡಿ ಓಡಿಬಂದ ಪೊಲೀಸರು, ತುರ್ತು ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ್ದಾರೆ.

ಆರಂಭದಲ್ಲಿ ಕೈಗೆ ಕಬ್ಬಿಣದ ವಸ್ತುಗಳನ್ನು ನೀಡಿ, ಕೈಕಾಲು ಬೆರಳು ಉಜ್ಜಿ ರಕ್ಷಿಸಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಸ್ಥಳಕ್ಕೆ ಆಗಮಿಸಿದರು. ಡಿವೈಎಸ್‍ಪಿ ಏಗನಗೌಡ್ರ, ಸಿಪಿಐ ಭೀಮನಗೌಡ ಬಿರಾದಾರ್, ಪಿಎಸ್‍ಐ ಕಮಲಾ ದೊಡ್ಡಮನಿ ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ರಕ್ಷಣೆ ಮಾಡಿ, ನಂತರ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಘಟನಾ ಸ್ಥಳದಲ್ಲಿ ಅನೇಕರು ಇದ್ದರೂ, ಯಾರೂ ಸಹಾಯಕ್ಕೆ ಬಾರದೇ ನಿಂತು ನೋಡುತ್ತಿದ್ದರು. ಆದರೆ ಪೊಲೀಸ್ ಸಿಬ್ಬಂದಿ ಮಾತ್ರ ಓಡೊಡಿ ಬಂದು ರಕ್ಷಿಸಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿಯೂ ಹಗಲು ರಾತ್ರಿ ಎನ್ನದೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮೂರ್ಛೆರೋಗದಿಂದ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *