ವ್ಯಾಪಾರಕ್ಕಲ್ಲ, ಹಸಿದವರ ಹೊಟ್ಟೆ ತುಂಬಿಸಲು ದಿನಪೂರ್ತಿ ಹೋಟೆಲ್ ಓಪನ್

– ಪೊಲೀಸ್, ನರ್ಸ್, ನಿರ್ಗತಿಕರಿಗೆ ಊಟ
– ಸ್ವಂತ ಕಾರಿನಲ್ಲಿ ತುಂಬಿ ಆಹಾರ ವಿತರಣೆ

ಮಡಿಕೇರಿ: ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಅಂಗಡಿ ಮುಂಗಟ್ಟು, ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದೆ. ಆದರೆ ಈ ಹೋಟೆಲ್ ಮಾತ್ರ ದಿನಪೂರ್ತಿ ತೆರೆದಿದೆ. ಆದರೆ ವ್ಯಾಪಾರಕ್ಕಲ್ಲ, ಬದಲಿಗೆ ಹಸಿದವರ ಹೊಟ್ಟೆ ತುಂಬಿಸಲು.

ಕುಶಾಲನಗರ ಸಮೀಪದ ಕೊಪ್ಪದಲ್ಲಿರುವ ಸಾಯಿ ಅಮೃತ್ ಹೋಟೆಲ್‍ನ ಮಾಲೀಕ ಚಂದ್ರಶೇಖರ್ ಈ ಮಹತ್ತರ ಕೆಲಸವನ್ನು ಕಳೆದ 11 ದಿನಗಳಿಂದ ಮಾಡುತ್ತಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ, ಜನಸಂದಣಿ ಇರುವಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸರಿಗೆ, ದಾದಿಯರಿಗೆ ಅಷ್ಟೇ ಅಲ್ಲ ಭಿಕ್ಷುಕರಿಗೆ ಮೂರು ಹೊತ್ತು ಊಟ ಪೂರೈಕೆ ಮಾಡುತ್ತಿದ್ದಾರೆ.

ಹೋಟೆಲ್ ತೆರೆದು ಅಲ್ಲಿಯೇ ನಿತ್ಯ ಅಡುಗೆ ತಯಾರಿಸಿ, ಬಳಿಕ ಸ್ವತಃ ತಮ್ಮದೇ ಕಾರಿನಲ್ಲಿ ತುಂಬಿಕೊಂಡು ಪೊಲೀಸರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಿಗೆ ಊಟ ಕೊಂಡೊಯ್ದು, ಹಸಿದ ಹೊಟ್ಟೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೊಪ್ಪ, ಕುಶಾಲನಗರ, ಕೂಡಿಗೆ ಮತ್ತು ಗುಡ್ಡೆಹೊಸೂರು ಗ್ರಾಮಗಳ ಸುತ್ತಮುತ್ತ ಇರುವ ನೂರಾರು ನಿರ್ಗತಿಕರನ್ನು ಹುಡುಕಿ ಅವರಿಗೆ ಮೂರು ಹೊತ್ತು ಆಹಾರ ನೀಡಿ ಅವರ ಹಸಿವು ನೀಗಿಸುತ್ತಿದ್ದಾರೆ. ದೇವರು ನಮಗೆ ಕೊಟ್ಟಿದ್ದಾನೆ, ಏನೂ ಇಲ್ಲದವರು ಹಸಿವಿನಿಂದ ಇರಬಾರದು. ಆದ್ದರಿಂದ ಲಾಕ್‍ಡೌನ್ ಮುಗಿಯುವವರೆಗೆ ಆಹಾರ ಪೂರೈಸುತ್ತೇನೆ ಎಂದು ಚಂದ್ರಶೇಖರ್ ಸದ್ದಿಲ್ಲದೆ ನೂರಾರು ಜನರ ಹಸಿವು ನೀಗಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *