ಊಟಕ್ಕೆ ಇಲ್ಲದಿದ್ರೂ ಪರವಾಗಿಲ್ಲ, ನನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ

– ಪತ್ನಿ ಉಳಿಸಿಕೊಳ್ಳಲು ಸಹಾಯಕ್ಕಾಗಿ ಅಂಗಲಾಚುತ್ತಿರೋ ಪತಿ

ಶಿವಮೊಗ್ಗ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಕೇಂದ್ರ ಸರ್ಕಾರ ರಾಷ್ಟ್ರದಾದ್ಯಂತ ಲಾಕ್‍ಡೌನ್ ನಿಷೇಧ ಹೇರಿದೆ. ಆದರೆ ಈ ಕೊರೊನಾದಿಂದಾಗಿ ಬಡವರು, ಕೂಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಇದೀಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಔಷಧಿಗೆ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

ಶಿವಮೊಗ್ಗದ ಕೃಷಿನಗರದ ಚಾನಲ್ ಬಳಿ ಇರುವ ಕುಟುಂಬವೊಂದು ಲಾಕ್‍ಡೌನ್ ವೇಳೆ ಕಷ್ಟ ಅನುಭವಿಸುತ್ತಿದ್ದಾರೆ. ಗಾರೆ ಕೆಲಸ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಮಂಜುನಾಥ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಾವು ಸಂಪಾದಿಸುವ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದರು.

ಮಂಜುನಾಥ್ ಪತ್ನಿ ದ್ಯಾಮವ್ವಗೆ ಕಳೆದ ಮೂರು ತಿಂಗಳಿನಿಂದ ಎರಡು ಕಿಡ್ನಿ, ಲಿವರ್ ಸಮಸ್ಯೆ ಹಾಗೂ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿದೆ. ಇದಕ್ಕಾಗಿ ಶಿವಮೊಗ್ಗದ ಎನ್‍ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಕೊಡಿಸಿದ್ದಾರೆ. ಚಿಕಿತ್ಸೆ ಪಡೆಯಲು ಹಾಗೂ ಔಷಧೋಪಚಾರಕ್ಕಾಗಿ ತಿಂಗಳಿಗೆ 10 ಸಾವಿರ ಹಣ ಖರ್ಚಾಗುತ್ತಿದೆ. ಮೊದಲೇ ಕೂಲಿ ಮಾಡಿ ಬದುಕುತ್ತಿದ್ದ ಕುಟುಂಬಕ್ಕೆ ಇದು ಮತ್ತಷ್ಟು ಬರೆ ಎಳೆದಂತಾಗಿದೆ.

ಈಗಾಗಲೇ ಸಾಲಸೋಲಾ ಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಮಂಜುನಾಥ್ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕಳೆದೊಂದು ತಿಂಗಳಿನಿಂದ ಲಾಕ್‍ಡೌನ್ ಇರುವ ಕಾರಣ ಒಂದೆಡೆ ಕೆಲಸವೂ ಇಲ್ಲದೆ ಮತ್ತೊಂದೆಡೆ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವು ಇಲ್ಲದೆ, ಮನೆಯಲ್ಲಿಯೇ ಕೂರುವಂತೆ ಆಗಿರುವುದು ಮತ್ತಷ್ಟು ಆಘಾತ ಉಂಟು ಮಾಡಿದೆ.

ಸಹಾಯ ಮಾಡಲು ಇಚ್ಛಿಸುವವರು:
ಹೆಸರು: ದ್ಯಾಮವ್ವ ( DYAMAVVA)
ಬ್ಯಾಂಕ್: ವಿಜಯ ಬ್ಯಾಂಕ್, ಎಲ್‍ಬಿಎಸ್ ನಗರ, ಶಿವಮೊಗ್ಗ
ಅಕೌಂಟ್ ನಂಬರ್ : 143301011004142
IFSC CODE : VIJB0001433

ಲಾಕ್‍ಡೌನ್ ನಡುವೆ ನಾವು ಜೀವನ ಮಾಡುವುದೇ ಕಷ್ಟವಾಗಿದೆ. ನಮಗೆ ಊಟಕ್ಕೆ ಇಲ್ಲದಿದ್ದರೂ ಪರವಾಗಿಲ್ಲ, ಹೇಗೋ ನೀರು ಗಾಳಿ ಸೇವಿಸಿ ಬದುಕುತ್ತೀವಿ. ಆದರೆ ನನ್ನ ಮಕ್ಕಳನ್ನು ನೋಡಿಕೊಳ್ಳಲು ತಾಯಿ ಬೇಕು. ಅದಕ್ಕಾದರೂ ನನ್ನ ಪತ್ನಿಯನ್ನು ಬದುಕಿಸಿಕೊಡಿ. ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ. ಸಹೃದಯ ದಾನಿಗಳು ಈ ಕುಟುಂಬಕ್ಕೆ ನೆರವು ನೀಡುವ ಮೂಲಕ ಸಹಾಯ ಮಾಡಬೇಕಿದೆ.

Comments

Leave a Reply

Your email address will not be published. Required fields are marked *