ಮಂಗ್ಳೂರಿನ ಬಿಗ್ ಬ್ಯಾಗ್ ಕಂಪನಿಯಿಂದ ಲಾಕ್‍ಡೌನ್ ಉಲ್ಲಂಘನೆ

– 3 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ಆರಂಭ

ಮಂಗಳೂರು: ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಯಾವುದೇ ಕಾರ್ಖಾನೆ, ಐಟಿ-ಬಿಟಿ ಕಂಪನಿಗಳು ಓಪನ್ ಆಗಿಲ್ಲ. ಆದರೆ ಮಂಗಳೂರು ತಾಲೂಕಿನ ಗಂಜಿಮಠ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬಿಗ್ ಬ್ಯಾಗ್ಸ್ ಪ್ರೈ.ಲಿ ಎಂಬ ಪ್ಲಾಸ್ಟಿಕ್ ಬ್ಯಾಗ್ ಉತ್ಪಾದನಾ ಕಂಪನಿ ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದೆ.

ಲಾಕ್‍ಡೌನ್ ನಡುವೆಯೂ ಬಿಗ್ ಬ್ಯಾಗ್ ಕಂಪನಿ ತನ್ನ ಕಾರ್ಮಿಕರನ್ನು ಕರೆಸಿಕೊಂಡು ಕಾರ್ಯಾರಂಭವನ್ನು ಮಾಡಿದೆ. ಹೊರ ರಾಜ್ಯದಿಂದಲೂ ಕಾರ್ಮಿಕರು ಆಗಮಿಸಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಂದ ಕೆಲಸ ಆರಂಭವಾಗಿದೆ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ನೌಕರರನ್ನು ಒಟ್ಟು ಸೇರಿಸಿರುವುದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ರೆಡ್ ಝೋನ್ ಪಟ್ಟಿಯಲ್ಲಿದ್ದು, ಕಂಪನಿಯ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ರೆಡಿ ಮಾಡುವ ಈ ಕಂಪನಿ ಏಪ್ರಿಲ್ 4ರಂದೇ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿತ್ತು. ಆದರೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *