ಯುವಕರಿಂದ ಗಂಗರ ಕಾಲದ ಪುರಾತನ ದೇವಾಲಯ ಜೀರ್ಣೋದ್ಧಾರ

– ಲಾಕ್‍ಡೌನ್ ವೇಳೆ ಊರಿಗೆ ಬಂದಾಗ ದೇವಾಲಯದ ಕೆಲಸ

ನೆಲಮಂಗಲ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಲಾಕ್‍ಡೌನ್ ಹಿನ್ನೆಲೆ ಊರಿಗೆ ಬಂದಿದ್ದು, ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಥಿಲಗೊಂಡಿದ್ದ ಗ್ರಾಮದಲ್ಲಿನ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ಗ್ರಾಮದ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯ ಶಿಥಿಲವಾಗಿತ್ತು. ಲಾಕ್‍ಡೌನ್ ಹಿನ್ನೆಲೆ ಗ್ರಾಮದಲ್ಲಿ ಕಾಲ ಕಳೆಯುತ್ತಿದ್ದ ಯುವಕರು ಈ ದೇವಸ್ಥಾನದ ಅವಸ್ಥೆ ನೋಡಿ ಜೀರ್ಣೋದ್ಧಾರ ಮಾಡಲು ಪಣ ತೊಟ್ಟರು. ಅದರಂತೆ ಯುವಕರು ಒಟ್ಟಾಗಿ, ಗ್ರಾಮಸ್ಥರ ಮನವೊಲಿಸಿ ಹಣ ಹೊಂದಿಸಿ, ಕಾಮಗಾರಿ ನಡೆಸಲು ಅನುಮತಿ ಪಡೆದು ಇದೀಗ ದೇವಸ್ಥಾನವನ್ನು ಪುಶ್ಚೇತನಗೊಳಿಸಿದ್ದಾರೆ.

ಸರ್ಕಾರದಿಂದ ಅನುಮತಿ ಪಡೆದು, ಸಾಮಾಜಿಕ ಅಂತರ ಹಾಗೂ ಸರ್ಕಾರದ ಇತರೆ ಕಟ್ಟುನಿಟ್ಟಿನ ನಿಯಮ ಪಾಲಿಸಿ ಕಾಮಗಾರಿ ನಡೆಸಲಾಗಿದೆ. ಗ್ರಾಮದಲ್ಲಿರುವ ಏಕೈಕ ಆಂಜನೇಯ ದೇವಾಲಯವನ್ನು ಸುಸ್ಥಿಯಲ್ಲಿಡಬೇಕೆಂಬ ಗ್ರಾಮಸ್ಥರ ಕನಸು ಇದರಿಂದ ನನಸಾಗಿದೆ. ಜೀರ್ಣೋದ್ಧಾರವಾದ ಖುಷಿಯಲ್ಲಿ ದೇಶ ಬೇಗ ಕರೊನಾ ಮುಕ್ತವಾಗಲಿ ಎಂಬ ಸಂಕಲ್ಪದಿಂದ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಪುರಾತನ ದೇವಾಲಯಗಳನ್ನು ಉಳಿಸುವಲ್ಲಿ ಯುವಕರ ಕೊಡುಗೆ ದೊಡ್ಡದು ಎಂದು ಊರಿನ ಹಿರಿಯ ಮುಖಂಡ ಭಾನುಪ್ರಕಾಶ್ ಹೇಳಿದರು.

Comments

Leave a Reply

Your email address will not be published. Required fields are marked *