ರೈತರ ಸಂಪೂರ್ಣ ಸಾಲಮನ್ನಾ: 150 ರೈತರು, ರಾಜಕೀಯ ನಾಯಕರೊಂದಿಗೆ ಸಿಎಂ ಸಭೆ

ಬೆಂಗಳೂರು: ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.

ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಪಕ್ಷ ನಾಯಕರೂ ಆಗಿರುವ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ಉಪ ಮುಖ್ಯಮಂತ್ರಿ ಪರಮೇಶ್ವರ್‍ರನ್ನು ಆಹ್ವಾನಿಸಲಾಗಿದೆ. ಆದ್ರೆ ಯಡಿಯೂರಪ್ಪ ಇವತ್ತು ಮಂಗಳೂರಿಗೆ ಭೇಟಿ ನೀಡ್ತಿದ್ದು, ಅವರ ಬದಲಿಗೆ ವಿಧಾನಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ ಭಾಗವಹಿಸ್ತಾರೆ. ಪ್ರತಿ ಜಿಲ್ಲೆಯಿಂದಲೂ ನಾಲ್ಕು ಪ್ರಗತಿಪರ ರೈತರು ಅಂದ್ರೆ ಒಟ್ಟು 150 ಮಂದಿ ರೈತರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಹಣಕಾಸು, ತೋಟಗಾರಿಕೆ, ಕೃಷಿ, ಸಹಕಾರ ಇಲಾಖೆಗಳ ಅಧಿಕಾರಿಗಳು ಸಭೆಗೆ ಭಾಗಿಯಾಗಲಿದ್ದಾರೆ.

ಪ್ರಮುಖವಾಗಿ ಸಾಲಮನ್ನಾ ವಿಷಯ ಚರ್ಚೆ ಆಗಲಿದ್ದು, ರೈತರ ಸಂಪೂರ್ಣ ಸಾಲಮನ್ನಾ ಒಂದೇ ಬಾರಿ ಮನ್ನಾ ಮಾಡಬೇಕಾ ಅಥವಾ 5 ವರ್ಷಗಳಲ್ಲಿ ಕಂತಿನ ಆಧಾರದಲ್ಲಿ ಸಾಲಮನ್ನಾ ಮಾಡಬೇಕಾ ಅನ್ನೋ ಕೆಲ ಮಾನದಂಡದ ಕುರಿತು ರೈತ ಸಂಘಟನೆಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

ಸರ್ಕಾರದ ಮುಂದಿರುವ ಪ್ರಶ್ನೆಗಳು:
1. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಹೀಗೆ ಎಲ್ಲ ಸ್ವರೂಪದ ಸಾಲ ಮನ್ನಾ ಮಾಡಬೇಕಾ..?
2. ಕೇವಲ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಬೇಕಾ..?
3. ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲವನ್ನು ಮಾತ್ರ ಮನ್ನಾ ಮಾಡಬೇಕಾ..?

ಮಾರ್ಗಗಳು:
1. ಹಂತ-ಹಂತವಾಗಿ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ.
2. ಹಂತವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಾಲ ಮನ್ನಾದ ಮೊತ್ತ ಪಾವತಿ.
2. ಆರ್‍ಬಿಐ ಮೂಲಕ ಬಾಂಡ್‍ಗಳನ್ನು ಘೋಷಿಸಿ ಆ ಮೂಲಕ ಸಂಪನ್ಮೂಲ ಕ್ರೋಡಿಕರಣ.
3. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿ ಸಾಲ ಮನ್ನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೆರವಿಗೆ ಒತ್ತಡ.

ಉಳಿದ ರಾಜ್ಯಗಳು ಏನು ಮಾಡಿವೆ..?
1. ಮಹಾರಾಷ್ಟ್ರ – 1.5 ಲಕ್ಷ ರೂಪಾಯಿವರೆಗೆ ರೈತ ಬೆಳೆ ಸಾಲ ಮನ್ನಾ – ಹೊರೆ 34 ಸಾವಿರ ಕೋಟಿ
2. ಉತ್ತರಪ್ರದೇಶ – 1 ಲಕ್ಷ ರೂಪಾಯಿವರೆಗೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ – ಹೊರೆ 36 ಸಾವಿರ ಕೋಟಿ
3. ಪಂಜಾಬ್ – ಸಣ್ಣ ಮತ್ತು ಮಧ್ಯಮ ವರ್ಗದ ರೈತರ 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲ, 2 ಲಕ್ಷಕ್ಕಿಂತ ಮೇಲ್ಪಟ್ಟ ಸಾಲವಿದ್ದಲ್ಲಿ 2 ಲಕ್ಷ ರೂಪಾಯಿ ಮನ್ನಾ – ಹೊರೆ 10 ಸಾವಿರ ಕೋಟಿ
4. ತೆಲಂಗಾಣ – 1 ಲಕ್ಷ ರೂಪಾಯಿವರೆಗೆ ರೈತರ ಬೆಳೆ ಸಾಲ ಮನ್ನಾ – ಹೊರೆ 17 ಸಾವಿರ ಕೋಟಿ ರೂಪಾಯಿ

ಕರ್ನಾಟಕದ ಸ್ಥಿತಿ ಏನು..?
* ಮಾರ್ಚ್ 2016ರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೃಷಿ ಸಾಲದ ಮೊತ್ತ – 34,637 ಕೋಟಿ ರೂ.
* ಇದರದಲ್ಲಿ ಬೆಳೆ ಸಾಲದ ಮೊತ್ತ 21,486 ಕೋಟಿ ರೂಪಾಯಿ
* ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲದ ಮೊತ್ತ – 14, 703 ಕೋಟಿ ರೂ.
* ಇದರಲ್ಲಿ ಬೆಳೆ ಸಾಲದ ಮೊತ್ತ – 10,270 ಕೋಟಿ ರೂಪಾಯಿ

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿರುವ ಸಾಲಮನ್ನಾ ಕುರಿತು ಮುಖ್ಯಮಂತ್ರಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದುಮ ಇಂದು ತಿಳಿಯಲಿದೆ. ಇತ್ತ ಒಂದು ವಾರದೊಳಗೆ ರೈತರ ಸಾಲಮನ್ನಾ ಮಾಡೆದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *