ನಿಮ್ಮ ಬೆಂಬಲ ಇದ್ದರೆ ಮದ್ಯ ನಿಷೇಧಕ್ಕೆ ಧ್ವನಿ ಎತ್ತುತ್ತೇನೆ- ಸಿ.ಟಿ.ರವಿ

ಚಿತ್ರದುರ್ಗ: ಮದ್ಯ ನಿಷೇಧದ ಕುರಿತು ಸದನ ಹೊರಗೂ ಹಾಗೂ ಒಳಗೆ ಧ್ವನಿ ಎತ್ತುತ್ತೇನೆ. ಆದರೆ ನಮ್ಮ ಬೆಂಬಲಕ್ಕೆ ನೀವು ನಿಲ್ಲುತ್ತೀರಾ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳುಬಾಳು ಗುರುಪೀಠದ ಬಯಲು ರಂಗ ಮಂದಿರದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ರವಿ ಮಾತನಾಡಿದರು. ಎಲ್ಲರೂ ಒಟ್ಟಾಗಿ ಧ್ವನಿ ಎತ್ತಿದರೆ ಸರ್ಕಾರವೂ ಅನೈತಿಕ ಆದಾಯವನ್ನು ಬಯಸುವುದಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಮದ್ಯ ನಿಷೇಧದ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮದ್ಯ ನಿಷೇಧಕ್ಕೆ ಸಿಎಂ ಬಿಎಸ್‍ವೈ ಚಿಂತನೆ – ಸಂಸದ ಬಸವರಾಜು

ನೀವು ಬೆಂಬಲ ನೀಡುವುದಾದರೆ, ನಾನು ಸಹ ಸಂಪುಟದ ಒಳಗೆ ಹಾಗೂ ಹೊರಗೆ ಮದ್ಯಪಾನ ನಿಷೇಧದ ಪರ ಧ್ವನಿ ಎತ್ತುತ್ತೇನೆ. ಅಲ್ಲದೆ ಇಂದಿನ ಪರಿಸ್ಥಿತಿಯಲ್ಲಿ ಮದ್ಯಪಾನ ನಿಷೇಧ ಮಾಡಬೇಕಾದ ಅಗತ್ಯವಿದೆ. ಗಾಂಧೀಜಿಯವರ 150ನೇ ಜನ್ಮ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ನಾವುಗಳು ಅವರ ಹಾದಿಯಲ್ಲಿ ನಡೆಯೋಣ. ಹೀಗಾಗಿ ಕೇವಲ ಮಾತಿಗೆ ಸೀಮಿತರಾಗಿ ಮದ್ಯ ನಿಷೇಧದ ಬಗ್ಗೆ ಮಾತನಾಡದೇ ನಿಷೇಧಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಅನೈತಿಕ ಮೂಲದ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರವೂ ಹೊಂದಬಾರದು. ಮತಕ್ಕಾಗಿ ರಾಜಕೀಯ ಮಾಡುವವರು ನಾವಲ್ಲ. ಸಿದ್ಧಾಂತದ ಹಿನ್ನೆಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ. ಹೀಗಾಗಿ ಕೆಲವೊಮ್ಮೆ ನಿಷ್ಠುರವಾಗಿ ಮಾತನಾಡುತ್ತೇವೆ. ರಾಜಕಾರಣಕ್ಕಾಗಿ ಸಿದ್ಧಾಂತ ಹಿಡಿದಿಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಮದ್ಯ ನಿಷೇಧದ ಕುರಿತು ಖಂಡಿತ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *