70 ವರ್ಷದಿಂದ ಹೊಟೇಲ್, ಬಾರ್‍ಗೆ ಬ್ರೇಕ್ – ಗದಗ್‍ನ ಲಿಂಗದಾಳು ಗ್ರಾಮ ಇಂದಿನ ಪಬ್ಲಿಕ್ ಹೀರೋ

ಗದಗ: ಸಾಮಾನ್ಯವಾಗಿ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವ್ಯಕ್ತಿ ಬಗ್ಗೆ ಹೇಳ್ತಿದ್ವಿ. ಆದ್ರೆ, ಇವತ್ತು ವ್ಯಕ್ತಿಯಲ್ಲ ಬದಲಾಗಿ ಇಡೀ ಗ್ರಾಮದ ಜನರೇ ಪಬ್ಲಿಕ್ ಹೀರೋಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಗದಗ ಜಿಲ್ಲೆಯ ಲಿಂಗದಾಳು ಗ್ರಾಮದಲ್ಲಿ ಹೊಟೇಲ್, ಸಾರಾಯಿ ಅಂಗಡಿ ಬಂದ್. ಹಾಗಂದ ಮಾತ್ರಕ್ಕೆ ಅಷ್ಟೊಂದು ಹಿಂದುಳಿದಿದೆ ಅಂತಲ್ಲ. 4ಜಿ ಜನರೇಷನ್ ಕಾಲದಲ್ಲೂ ಈ ಗ್ರಾಮಸ್ಥರು ಹಳೇ ನಿಯಮವನ್ನ ಫಾಲೋ ಮಾಡ್ತಿದ್ದಾರೆ ಅನ್ನೋದು ವಿಶೇಷ.

ಹೌದು. ಗದಗ ಜಿಲ್ಲೆಯ ಲಿಂಗದಾಳ ಗ್ರಾಮ ಸುತ್ತುವರೆದ್ರೂ ಒಂದೆ ಒಂದು ಹೊಟೇಲ್ ಸಿಗೊಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮದಲ್ಲಿ ಐದಾರು ಟೀ ಅಂಗಡಿಗಳಿದ್ದವು. ಹೊಟೇಲ್ ಹಾಗೂ ಸಾರಾಯಿ ಚಟಕ್ಕಾಗಿ ಮನೆಯಲ್ಲಿರುವ ಆಭರಣ, ದವಸ-ಧಾನ್ಯಗಳು, ಇನ್ನಿತರ ವಸ್ತುಗಳನ್ನ ತಂದು ಮಾರಾಟಮಾಡಿ ಬಂದ ಹಣದಿಂದ ತಮ್ಮ ಬಯಕೆ ತಿರಿಸಿಕೊಳ್ಳುತ್ತಿದ್ರು. ಜೊತೆಗೆ ಎಲ್ಲರು ಒಂದೆ ಕಡೆ ಸೇರುವುದರಿಂದ ಅಲ್ಲಿ ಅನಾವಶ್ಯಕ ಮಾತು-ಕಥೆಗಳು ಹೊರ ಬರುತ್ತಿದ್ದವು. ಇದರಿಂದ ಊರಲ್ಲಿ ಜಗಳ ಗಲಾಟೆಗಳು ನಡೆದು, ಅದೆಷ್ಟೋ ಸಂಸಾರಗಳು ಹಾಳಾದವು.

ಯುವಕರು ಚಟಕ್ಕೆ ಬಲಿಯಾಗಿ ಕುಟುಂಬಗಳು ಹಾಳಾಗಬಾರದು ಎನ್ನುವ ಉದ್ದೇಶದಿಂದ ಹಿರಿಯರು ಸೇರಿಕೊಂಡು ಹೊಟೇಲ್, ಮದ್ಯಮಾರಾಟ, ಹಾಗೂ ಜೂಜು ಆಡುವುದಕ್ಕೆ ಸುಮಾರು 70 ವರ್ಷದ ಹಿಂದೆಯೇ ಇತಿಶ್ರೀ ಹಾಡಿದ್ರು. 1947 ರಿಂದ ಇವತ್ತಿನವರೆಗೂ ಈ ಊರಿನಲ್ಲಿ ಯಾವುದೇ ಹೊಟೆಲ್‍ಗಳಿಲ್ಲ ಅಂತಿದ್ದಾರೆ ಊರಿನ ಹಿರಿಯರು.

ಈ ಊರಿನಲ್ಲಿರುವ ಹೊಟೇಲ್ ಹಾಗೂ ಸಾರಾಯಿ ಅಂಗಡಿಗೆ ಗ್ರಾಮಸ್ಥರೆಲ್ಲಾ ಸೇರಿ ಯಾವಾಗ ಕಡಿವಾಣ ಹಾಕಿದ್ರೋ, ಅಂದಿನಿಂದ ಈ ಊರಿನಲ್ಲಿ ಹರಟೆ ಹೊಡೆಯೋರ ಸಂಖ್ಯೆಯೂ ಕಡಿಮೆ ಆಗಿದ್ದು, ಎಲ್ಲರೂ ಮೈ ಬಗ್ಗಿಸಿ ದುಡೀತಿದ್ದಾರೆ. ಈಗಿನ ಯುವಕರು ಇದೇ ಪದ್ಧತಿಯನ್ನ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದ್ದಾರೆ.

ಬೇರೆ ಊರಿಂದ ಬರೋ ಸ್ನೇಹಿತರು ನಿಮ್ಮ ಊರಿನಲ್ಲಿ ಕುಡಿಯೋದಕ್ಕೆ ಒಂದು ಲೋಟ ಟೀ ಸಿಗೋದಿಲ್ಲ ಅಂದು ಕುಹಕ ಆಡುತ್ತಿದ್ದಾರೆ. ಆದರೂ, ಪರವಾಗಿಲ್ಲ. ಹಿರಿಯರ ಮಾತನ್ನ ಮೀರೋದಿಲ್ಲ ಅಂತ ಅಲ್ಲಿನ ಜನ ಕಟಿಬದ್ಧರಾಗಿದ್ದಾರೆ.

https://www.youtube.com/watch?v=9dSdl0XGr74

Comments

Leave a Reply

Your email address will not be published. Required fields are marked *