ಕಾಲು ಕಳೆದುಕೊಂಡರೂ ಪ್ರೀತಿ ಕೈ ಹಿಡಿಯಿತು – ಆಸ್ಪತ್ರೆಯಲ್ಲೇ ಮದ್ವೆಯಾದ ಜೋಡಿ

ಚೆನ್ನೈ: ಪ್ರೀತಿ ಶಾಶ್ವತ ಅನ್ನೋ ಮಾತೇ ಇದೆ. ನಿಜವಾಗಿ ಪ್ರೀತಿಸಿದ್ದರೆ ಎಂತಹ ಕಠಿಣ ಸಂದರ್ಭಗಳಲ್ಲೂ ಜೋಡಿಗಳು ಒಬ್ಬರಿಗೊಬ್ಬರು ಆಸರೆ ಆಗಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಯುವ ಜೋಡಿಯೊಂದು ಕಾಲು ಕಳೆದುಕೊಂಡಿದ್ದರೂ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾರೆ.

ಶಿಲ್ಪಾ ಮತ್ತು ವಿಜಯ್ ವೆಲ್ಲೋರ್ ನ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ವಿವಾಹವಾಗಿದ್ದಾರೆ. ಜನವರಿ 23ರಂದು ವಿಜಯ್ ರೈಲಿನಿಂದ ಕೆಳಕ್ಕೆ ಬಿದ್ದು ಕಾಲುಗಳನ್ನೇ ಕಳೆದುಕೊಂಡಿದ್ದರು. ಸದ್ಯ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಶಿಲ್ಪಾ ಹಾಗೂ ವಿಜಯ್ ವಿವಾಹ ನೆರವೇರಿದೆ.

ನಡೆದಿದ್ದೇನು?
ಶಿಲ್ಪಾ ಮೂಲತಃ ಊಟಿಯವರು. ಕೊಯಂಬತ್ತೂರು ಕಾಲೇಜಿನಲ್ಲಿ ಬಿಎಸ್ ಸಿ ಓದುತ್ತಿದ್ದಾಗ ವಿಜಯ್ ಪರಿಚಯವಾಗಿತ್ತು. ವಿಜಯ್ ಕೊಯಂಬತ್ತೂರಿನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದರು. ಶಿಲ್ಪಾ ಸಹ ಕೆಲಸ ಹುಡುಕುತ್ತಿದ್ದರು. ಬೆಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ವಿಜಯ್ ವಾಪಸ್ ತೆರಳುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಸಮೀಪದಲ್ಲಿ ಆಕಸ್ಮಿಕವಾಗಿ ಟ್ರೈನ್ ನಿಂದ ಬಿದ್ದಿದ್ದಾರೆ.

ತಕ್ಷಣ ವಿಜಯ್ ಗೆ ಕರ್ನಾಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ವಿಜಯ್ ಅವರನ್ನು ವಾನಿಯಂಬಾಡಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ವಿಜಯ್‍ಗೆ ಫಿಸಿಯೋಥೆರಪಿ ನಡೆಯುತ್ತಿದ್ದು, ಶೀಘ್ರದಲ್ಲೇ ವಾಕರ್ ಸಹಾಯದಿಂದ ನಡೆದಾಡಬಲ್ಲರು ಅಂತಾ ವೈದ್ಯರು ತಿಳಿಸಿದ್ದಾರೆ.

ಈ ಅಪಘಾತದ ಬಳಿಕ ಮದುವೆಗೆ ಶಿಲ್ಪಾಳ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಪೋಷಕರ ಮಾತನ್ನು ಲೆಕ್ಕಿಸದೇ ಶಿಲ್ಪಾ ತಾನು ಮನಸಾರೆ ಪ್ರೀತಿಸಿದ ಯುವಕನನ್ನು ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ವೈದ್ಯರು, ಸಿಬ್ಬಂದಿ ನವದಂಪತಿಗೆ ಶುಭ ಕೋರಿದ್ದಾರೆ.

ಶಿಲ್ಪಾ ಮತ್ತು ವಿಜಯ್ ತಮ್ಮ ಶಿಕ್ಷಣ ಮುಗಿದ ಮೇಲೆ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಬೇಕು ಎಂದುಕೊಂಡಿದ್ದರು ಎಂದು ಶಿಲ್ಪಾಳ ಸಂಬಂಧಿಕರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *