ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

ಧಾರವಾಡ: ಬ್ರಿಟಿಷರಂತೆಯೇ ಕಾಂಗ್ರೆಸ್ ಕೂಡ ಮುಸ್ಲಿಂ ತುಷ್ಟೀಕರಣ ಮಾಡುತ್ತ ಒಡೆದು ಆಳುವ ನೀತಿ ಅನುಸರಿಸಿದೆ ಎಂದು ಸಂಶೋಧಕ, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಕಾಂಗ್ರೆಸ್ ಹಾಗೂ ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ನಡೆದ ಆವರಣ ಕೃತಿಯ 40ನೇ ಮುದ್ರಣದ ಸಂಭ್ರಮದಲ್ಲಿ ಮಾತನಾಡಿದ ಅವರು, ನೆಹರು ನೇರವಾಗಿಯೇ ಮುಸ್ಲಿಮರಿಗೆ ಧಮ್ಕಿ ಹಾಕಿ ನೀವು ನಮಗೆ ಮತ ಹಾಕಬೇಕು ಅಂದಿದ್ದರು. ಅದನ್ನೇ ಮಾದರಿಯಾಗಿ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದೇ ಕಾರಣಕ್ಕೆ ಇಂದು ರಾಹುಲ್‍ಗಾಂಧಿ 370ನೇ ವಿಧಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಇದನ್ನು ವಿರೋಧಿಸದೇ ಹೋದರೆ ನನ್ನ ಮುತ್ತಜ್ಜ ನೆಹರೂ ಮಾಡಿದ್ದೆಲ್ಲ ತಪ್ಪಾಗಿ ಬಿಡುತ್ತದೆ ಎನ್ನುವುದು ರಾಹುಲ್‍ಗೆ ಗೊತ್ತಿದೆ, ಹೀಗಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆಹರು ಕುಟಂಬಕ್ಕೆ ತುಂಬಾ ಸೊಕ್ಕು ಇತ್ತು. ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರು ಔರಂಗಜೇಬನ ಇತಿಹಾಸ ಮರೆಮಾಚಿದ್ದಾರೆ. ಔರಂಗಜೇಬ್ ಖುರಾನ್ ಪ್ರತಿಗಳನ್ನು ನಕಲು ಮಾಡಿ ಮಾರಿ ಆ ದುಡ್ಡಿನಲ್ಲಿ ಮಾತ್ರ ಊಟ ಮಾಡುತಿದ್ದ ಎಂದು ಬರೆದಿದ್ದಾರೆ. ಇಷ್ಟು ದೇವಸ್ಥಾನ ಒಡೆದ, ಇಷ್ಟು ಜನರನ್ನು ಮತಾಂತರ ಮಾಡಿಸಿದ ಎಂದು ಎಲ್ಲಿಯೂ ಬರೆದಿಲ್ಲ ಎಂದು ನೆಹರು ವಿರುದ್ಧ ಕಿಡಿಕಾರಿದರು.

ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ದೇಶವನ್ನು ಯಾರ ಕೈಗೆ ಕೊಡಬೇಕೆಂದು ಕಾಂಗ್ರೆಸ್‍ಗೆ ಕೇಳಿದರು. ಆಗ ಕಾಂಗ್ರೆಸ್‍ನ 15 ಪ್ರಾದೇಶಿಕ ಕಮೀಟಿಗಳ ಪೈಕಿ ನೆಹರು ಹೆಸರನ್ನು ಒಬ್ಬರೂ ಹೇಳಿರಲಿಲ್ಲ. ಆದರೆ ಸರ್ದಾರ ವಲ್ಲಭಾಯ್ ಪಟೇಲ್‍ರ ಹೆಸರನ್ನು 12 ಕಮೀಟಿ ಹೇಳಿದ್ದವು. ನೆಹರು ನಾನು ಆದರೆ ಪ್ರಧಾನಿಯೇ ಆಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಆಗ ಗಾಂಧೀಜಿ ಸರ್ದಾರ್ ವಲ್ಲಭಾಯ್ ಪಟೇಲರಿಗೆ ಹಿಂದೆ ಸರಿಯುವಂತೆ ಸೂಚಿಸಿದರು ಎಂದು ವಿವರಿಸಿದರು.

ಇದಕ್ಕೂ ಮೊದಲು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಭೂಗತರಾಗಬೇಕಾದಲ್ಲಿ ಗಾಂಧೀಜಿಯೆ ಕಾರಣವಾಗಿದ್ದರು. ಹಾಗೆಯೇ ನನ್ನ ಸ್ಥಿತಿಯೂ ಆಗದಿರಲಿ ಎಂದು ಸರ್ದಾರ್ ವಲ್ಲಭಾಯ್ ಪಟೇಲರು ಹಿಂದೆ ಸರಿದಿದ್ದರು ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *