ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಿದೇಶಿ ಬಂಡವಾಳ ಹೂಡಿಕೆ (FDI) ಅಡಿ ನಿರ್ಮಾಣವಾಗಲಿರುವ ಮೊದಲ ಯೋಜನೆಯ ನಿರ್ಮಾಣ ಕಾಮಗಾರಿ ಕೆಲಸ ಅಧಿಕೃತವಾಗಿ ಆರಂಭವಾಗಿದೆ.

ಬುರ್ಜ್ ಖಲೀಫಾದ ಡೆವಲಪರ್ ಯುಎಇ ಮೂಲದ Emaar ಗ್ರೂಪ್ ಶ್ರೀನಗರದಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಕೈಹಾಕಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 10 ಲಕ್ಷ ಚದರ ಅಡಿ ನಿರ್ಮಾಣವಾಗಲಿರುವ “ಮಾಲ್ ಆಫ್ ಶ್ರೀನಗರ”ಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ

ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್‌ ಸಿನ್ಹಾ, ಇದು 500 ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷವಾಗಿ ಶ್ರೀನಗರ ಮತ್ತು ಸುತ್ತಮುತ್ತಲಿನ ಜನರ ಬಹುಕಾಲದ ಕನಸು ಈಡೇರಲಿದೆ. ಜಮ್ಮುವಿನಲ್ಲಿ 150 ಕೋಟಿ ರೂ.ಗಳ ಐಟಿ ಟವರ್‌ ಸ್ಥಾಪಿಸಲಾಗುವುದು. ಅದಕ್ಕಾಗಿ ಭೂಮಿ ನೀಡಲಾಗಿದೆ ಎಂದು ತಿಳಿಸಿದರು.

ಶ್ರೀನಗರ ಮತ್ತು ಜಮ್ಮುವಿನಲ್ಲಿ ಎಮಾರ್ ಯೋಜನೆಗಳಿಂದ ಉದ್ಯೋಗದ ಪರ್ವ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕೈಗಾರಿಕಾ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು.

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ಹಲವಾರು ಗಲ್ಫ್‌ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತೆ ಆಹ್ವಾನಿಸಿತ್ತು. ಕಳೆದ ವರ್ಷ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳ ಸುಮಾರು 36 ಸಿಇಒಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

Comments

Leave a Reply

Your email address will not be published. Required fields are marked *